ಬೆಂಗಳೂರು: ಆಸ್ತಿ ಖರೀದಿ, ಮಾರಾಟ ಸೇರಿ ನೋಂದಣಿ ಪ್ರಕ್ರಿಯೆಗೆ ಬಳಸುವ ಕಾವೇರಿ 2.0 ತಂತ್ರಾಂಶವನ್ನು ಅಪರಿಚಿತರು ಹ್ಯಾಕ್ ಮಾಡಿರುವ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ (ಐಜಿಆರ್) ಕೆ.ಎ.ದಯಾನಂದ್ ದೂರು ನೀಡಿದ್ದಾರೆ.
ಈ ಸಂಬಂಧ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಸರ್ವರ್ ಸಮಸ್ಯೆಯಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿತ್ತು. ಐಜಿಆರ್ ಅವರು ಪರಿಶೀಲಿಸಿದಾಗ ಅಪರಿಚಿತರು ಕಾವೇರಿ 2.0 ಸಾಫ್ಟ್ವೇರ್ ಅನ್ನು ಹ್ಯಾಕ್ ಮಾಡಿ, ವೆಬ್‌ಸೈಟ್ ಪ್ರವೇಶಿಸಿ ಅದರಲ್ಲಿರುವ ದತ್ತಾಂಶಗಳನ್ನು ಕಳವು ಮಾಡಲು ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ.
ಈ ರೀತಿಯ 62 ಇ-ಮೇಲ್ ಖಾತೆಗಳು ಹಾಗೂ ಅವುಗಳ ಐಪಿ ವಿಳಾಸಗಳ ಪಟ್ಟಿಯನ್ನು ಸ್ಮಾರ್ಟ್ ಗವರ್ನೆನ್ಸ್ ಸೆಂಟರ್ (ಸಿಎಸ್‌ಜಿ) ನೀಡಿದೆ.
ಸೈಬರ್ ದಾಳಿಕೋರರು ಹ್ಯಾಕ್ ಮಾಡಿದ ಕಾರಣ, ಕಾವೇರಿ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆ ಜನವರಿಯಲ್ಲಿ ಉಂಟಾಗಿತ್ತು.
ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ (ಇ.ಸಿ), ಸರ್ಟಿಫಿಕೇಟ್ ಕಾಪಿ (ಸಿ.ಸಿ) ಮತ್ತು ಇತರ ಸೇವೆಗಳನ್ನು ಉಪ ನೋಂದಣಿ ಕಚೇರಿ ಒದಗಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.