ADVERTISEMENT

₹ 900 ಪಡೆಯಲು ₹ 3.85 ಲಕ್ಷ ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 20:04 IST
Last Updated 23 ಮಾರ್ಚ್ 2021, 20:04 IST

ಬೆಂಗಳೂರು: ಬ್ಯಾಂಕ್‌ ಖಾತೆಯಿಂದ ಕಡಿತವಾಗಿದ್ದ ₹ 900 ವಾಪಸು ಪಡೆಯಲು ಸಹಾಯವಾಣಿ ಸಂಪರ್ಕಿಸಿದ್ದ ಗ್ರಾಹಕರೊಬ್ಬರು, ಆನ್‌ಲೈನ್‌ ವಂಚಕರ ಜಾಲದಲ್ಲಿ ಸಿಲುಕಿ ₹ 3.85 ಲಕ್ಷ ಕಳೆದುಕೊಂಡಿದ್ದಾರೆ.

ಈ ವಂಚನೆ ಸಂಬಂಧ ನಗರದ ಪಶ್ಚಿಮ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೂರುದಾರರು ಇಂಡಸ್ ಇಂಡ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಅವರ ಖಾತೆಯಿಂದ ಮಾ. 16ರಂದು ₹ 900 ಕಡಿತವಾಗಿತ್ತು. ಆ ಬಗ್ಗೆ ವಿಚಾರಿಸಲು ಅವರು ಸಹಾಯವಾಣಿಗೆ ಕರೆ ಮಾಡಿದ್ದರು. ಪ್ರತಿನಿಧಿಗಳು ಕರೆ ಸ್ವೀಕರಿಸಿರಲಿಲ್ಲ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಕೆಲ ನಿಮಿಷಗಳ ನಂತರ ದೂರುದಾರರಿಗೆ ಕರೆ ಮಾಡಿದ್ದ ವಂಚಕರು, ಬ್ಯಾಂಕ್ ಪ್ರತಿನಿಧಿಗಳೆಂದು ಹೇಳಿಕೊಂಡಿದ್ದರು. ಸಮಸ್ಯೆ ಕೇಳಿದ್ದ ವಂಚಕರು, ₹ 900 ವಾಪಸು ನೀಡುವುದಾಗಿ ಹೇಳಿ ನಂಬಿಸಿದ್ದರು. ಬ್ಯಾಂಕ್ ಖಾತೆ ಮಾಹಿತಿ ಹಾಗೂ ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ) ಪಡೆದಿದ್ದ ಆರೋಪಿಗಳು, ದೂರುದಾರ ಖಾತೆಯಿಂದ ಹಂತ ಹಂತವಾಗಿ ₹ 3.85 ಲಕ್ಷವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಬ್ಯಾಂಕ್ ಸಹಾಯವಾಣಿ ಪ್ರತಿನಿಧಿಗಳ ಹೆಸರಿನಲ್ಲಿ ಆರೋಪಿಗಳು ವಂಚಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಬ್ಯಾಂಕ್‌ಗೂ ಪತ್ರ ಬರೆದು ಮಾಹಿತಿ ಕೋರಲಾಗಿದೆ. ಹಣ ವರ್ಗಾವಣೆ ಆಗಿರುವ ಖಾತೆಗಳ ವಿವರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.