ಬೆಂಗಳೂರು: ಗೃಹ ನಿರ್ಮಾಣ ಸಹಕಾರ ಸಂಘವೊಂದರಲ್ಲಿ ಅಕ್ರಮ ನಡೆದಿದೆ ಎಂದು ದೂರು ನೀಡಿದ ನಿವೃತ್ತ ನೌಕರರೊಬ್ಬರು ಎರಡೂವರೆ ವರ್ಷದಿಂದ ಏಕಾಂಗಿಯಾಗಿ ಸರ್ಕಾರಿ ಕಚೇರಿಗಳ ಬಾಗಿಲು ತಟ್ಟುತ್ತಿದ್ದಾರೆ. ಸಹಕಾರ ಇಲಾಖೆ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ಪೊಲೀಸ್ ಇಲಾಖೆಗೆ ದೂರುಗಳ ಮೇಲೆ ದೂರು ನೀಡಿ ನ್ಯಾಯ ಸಿಗದೆ ’ತಬರ‘ನಂತಾಗಿದ್ದಾರೆ.
‘ಲಿಂಗಧೀರನಹಳ್ಳಿ ಡಿ ಗ್ರೂಪ್ ಬಡಾವಣೆಯ ಹೌಸಿಂಗ್ ಸೊಸೈಟಿಯ ಪದಾಧಿಕಾರಿಗಳು ಕಾನೂನುಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ಹಂಚಿಕೆಯಾದ ಕೆಲ ನಿವೇಶನಗಳನ್ನು ರದ್ದು ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿ ಇದೇ ಬಡಾವಣೆಯ 71 ವರ್ಷ ವಯಸ್ಸಿನ ವಿ. ಬಸವರಾಜ ಅವರು 2020 ಏಪ್ರಿಲ್‌ನಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಿಕರಿಗೆ ದೂರು ನೀಡಿದ್ದರು.
ದೂರಿನ ಸಂಬಂಧ ಯಾವುದೇ ಕ್ರಮ ಕೈಗೊಳ್ಳದ ಜಂಟಿ ನಿಬಂಧಕರ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಕಚೇರಿಯಲ್ಲೂ ಎಂಟು ತಿಂಗಳ ಕಾಲ ದೂರು ನನೆಗುದಿಗೆ ಬಿದ್ದಿತ್ತು. ದೂರಿನ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿ ದರು. ಆಗ ಎಚ್ಚೆತ್ತ ಎಸಿಬಿ ಅಧಿಕಾರಿಗಳು, ದೂರನ್ನು ಸಹಕಾರ ಇಲಾಖೆಗೆ ವರ್ಗಾಯಿಸಿದರು. ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ರವಾನಿಸಿದರು. ಅವರು ಅದೇ ಜಂಟಿ ನಿಬಂಧಕರಿಗೆ ವಾಪಸ್ ಪತ್ರ ರವಾನಿಸಿದರು.
‘ಅರ್ಜಿಯು ಎಸಿಬಿ, ಸಹಕಾರ ಇಲಾಖೆ, ರಿಜಿಸ್ಟ್ರಾರ್ ಕಚೇರಿ ಸುತ್ತಾಡಿ ಬರುವಷ್ಟರಲ್ಲಿ 2 ವರ್ಷ ಕಳೆದಿತ್ತು. 2 ವರ್ಷಗಳ ಹಿಂದೆ ಇದೇ ಜಂಟಿ ನಿಬಂಧಿ ಕರಿಗೆ ನೀಡಿದ್ದ ದೂರು ಆಧರಿಸಿ ತನಿಖೆ ಆರಂಭಿಸಿದ್ದರೆ ಸುತ್ತಾಡುವ ಅಗತ್ಯ ಇರುತ್ತಿರಲಿಲ್ಲ. ವಿನಾಕಾರಣ ಎರಡು ವರ್ಷ ನನ್ನನ್ನು ಸುತ್ತಾಡಿಸಿದರು’ ಎಂದು ಬಸವರಾಜ ಬೇಸರ ವ್ಯಕ್ತಪಡಿಸುತ್ತಾರೆ.
‘ಉಪ ನಿಬಂಧಕರಿಗೆ ಪತ್ರ ರವಾ ನಿಸಿ ಗೃಹ ನಿರ್ಮಾಣ ಸಂಘಕ್ಕೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದು 7 ದಿನಗಳಲ್ಲಿ ಸಲ್ಲಿಸುವಂತೆ ಜಂಟಿ ನಿಬಂ ಧಕರು ತಿಳಿಸಿದ್ದಾರೆ. ಒಂದೂವರೆ ತಿಂಗಳಾ ದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಮತ್ತೊಮ್ಮೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇನೆ’ ಎಂದರು.
‘ಅಕ್ರಮ ನಡೆದಿದೆ ಎಂದು ದೂರು ನೀಡಿದ ತಪ್ಪಿಗೆ ನಾನು ಕಚೇರಿಗಳ ಬಾಗಿಲು ಸವೆಸಿದ್ದೇನೆ. ಅಕ್ರಮ ಎಸಗಿದವರು ನಿಶ್ಚಿಂತೆಯಿಂದ ಇದ್ದಾರೆ. ದೂರು ನೀಡಿದವರನ್ನು ಸರ್ಕಾರಿ ಅಧಿಕಾರಿಗಳು ಇಷ್ಟೊಂದು ಸತಾಯಿಸಿದರೆ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಹೇಗೆ’ ಎಂದು ಅವರು ನೋವಿನಿಂದ ಪ್ರಶ್ನಿಸಿದರು.
‘ಪ್ರತಿಭಟನೆಗೆ ಅನುಮತಿ ಕೋರಿದ್ದ ಅರ್ಜಿಯೂ ಬಾಕಿ’
ಎಸಿಬಿ ಕಚೇರಿ ಸುತ್ತಾಡಿ ಬಂದರೂ ತನಿಖೆ ಆರಂಭಿಸದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಎದುರು ಏಕಾಂಗಿ ಧರಣಿ ನಡೆಸಲು ಮಲ್ಲೇಶ್ವರ ಪೊಲೀಸ್ ಠಾಣೆಗೆ ಬಸವರಾಜ್ ಮನವಿ ಸಲ್ಲಿಸಿದ್ದರು.
‘ಆರು ತಿಂಗಳು ಕಳೆದರೂ ಅನುಮತಿ ದೊರಕಲಿಲ್ಲ. ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ಹಿಂಬರಹವನ್ನೂ ನೀಡಲಿಲ್ಲ. ಮನವಿಗೆ ಉತ್ತರ ನೀಡದ ಮಲ್ಲೇಶ್ವರ ಪೊಲೀಸರ ವಿರುದ್ಧ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದೆ. ಅಲ್ಲಿಯೂ ಮೂರು ತಿಂಗಳು ಉತ್ತರ ಸಿಗಲಿಲ್ಲ’ ಎಂದು ಬಸವರಾಜ್ ಹೇಳಿದರು.
‘ದೂರಿನ ಬಗ್ಗೆ ಕ್ರಮ ಕೈಗೊಂಡ ಮಾಹಿತಿ ಕೋರಿ ಮೂರು ತಿಂಗಳ ಬಳಿಕ ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹೋದಾಗ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ರವಾನೆ ಆಯಿತು. ಇದೀಗ ಹಿಂಬರಹ ನೀಡಿದ್ದಾರೆ. ಹೈಕೋರ್ಟ್ ಆದೇಶ ಇರುವುದರಿಂದ ಸ್ವಾತಂತ್ರ್ಯ ಉದ್ಯಾನ ಹೊರತಾಗಿ ಯಾವ ಕಚೇರಿ ಎದುರೂ ಧರಣಿ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.