ADVERTISEMENT

ದಲಿತ ಕಾಲೊನಿಯಲ್ಲಿ ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:29 IST
Last Updated 20 ನವೆಂಬರ್ 2018, 20:29 IST
ಹಳೆ ಬಾವಿಯಿಂದ ನೀರು ಸೇದುತ್ತಿರುವ ಮಹಿಳೆಯರು
ಹಳೆ ಬಾವಿಯಿಂದ ನೀರು ಸೇದುತ್ತಿರುವ ಮಹಿಳೆಯರು   

ದಾಬಸ್‌ಪೇಟೆ: ಸಮೀಪದ ಶಿವಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಾಳು ಗ್ರಾಮದಲ್ಲಿ ದಲಿತ ಕಾಲೊನಿಯ ಜನ ಕುಡಿಯುವ ನೀರು ಹಾಗೂ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ.

‘ಈ ಕಾಲೊನಿಯಲ್ಲಿ 25 ಮನೆಗಳಿವೆ. ನೀರು ಪೂರೈಕೆ ನಿಂತು ಸುಮಾರು 6 ತಿಂಗಳು ಕಳೆದಿದೆ. ಮೋಟಾರ್‌ನ ಸ್ಟಾರ್ಟರ್‌ ಕೆಟ್ಟು ಹೋಗಿದೆ ಎಂದು ಗ್ರಾಮ ಪಂಚಾಯಿತಿಯವರು ಹೇಳುತ್ತಿದ್ದಾರೆ. ಇಲ್ಲೇ ಸಮೀಪದ ಬಾವಿಯ ನೀರು ಸೇವಿಸಬೇಕಾದ ಅನಿವಾರ್ಯತೆ ಅವರದ್ದು. ಅದೂ ಕಲುಷಿತಗೊಂಡಿದೆ’ ಎಂಬ ಅಳಲು ಇಲ್ಲಿನ ಜನರದ್ದು.

‘ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಿದ್ದೇವೆ. ಯಾರೂ ಸ್ಪಂದಿಸಿಲ್ಲ’ ಎಂದು ಪಂಚಾಯಿತಿಯಮಾಜಿ ಉಪಾಧ್ಯಕ್ಷೆ ವಸಂತ ಕುಮಾರಿ ಹೇಳಿದರು.

ADVERTISEMENT

‘ಕೆರೆಯಲ್ಲಿ ಕೊಳವೆ ಬಾವಿ ಇದೆ. ಅಲ್ಲಿಂದ ಪೈಪ್‌ಲೈನ್‌ ಮೂಲಕ ಕಾಲೊನಿ ಮತ್ತು ಶಾಲೆಗೆ ನೀರು ತರಲಾಗಿದೆ. ಅದಕ್ಕೆ ಕೊಳಚೆ ನೀರು ಮಿಶ್ರಣವಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಇಲ್ಲೊಂದು ದಲಿತ ಕಾಲೊನಿ ಇದೆ ಅನ್ನುವುದೇ ಗೊತ್ತಿಲ್ಲ’ ಎಂದು ಸ್ಥಳೀಯರಾದ ಗಂಗಾಧರಯ್ಯ ವಿಷಾದ ವ್ಯಕ್ತಪಡಿಸಿದರು.

‘ಕಾಲೊನಿಯಲ್ಲಿ ಚರಂಡಿ ಇಲ್ಲ. ರಾತ್ರಿ ವೇಳೆ ಬೀದಿ ದೀಪಗಳು ಉರಿಯುತ್ತಿಲ್ಲ. ಸಂಜೆ ಮನೆಯೊಳಗೆ ಸೇರಬೇಕು. ಕಾಡು ಹತ್ತಿರವಿರುವುದರಿಂದ ಚಿರತೆ ಕಾಟ. ಊರಿಗೆ ಬಂದು ನಾಯಿಗಳನ್ನು ಎತ್ತಿ ಒಯ್ಯುತ್ತಿವೆ. ಭಯದಲ್ಲಿ ರಾತ್ರಿ ಕಳೆಯಬೇಕು’ ಎಂದುಗೃಹಿಣಿ ಶೈಲಜಾ ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ‍ಪ್ರತಿಕ್ರಿಯೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.