ADVERTISEMENT

ಮಳೆ ಬಂದಾಗಲೆಲ್ಲಾ ಜಾಗರಣೆ

ಎಂಟನೇ ಮೈಲಿ ಸುತ್ತಮುತ್ತಲ ಬಡಾವಣೆಗಳ ಜನರಿಗೆ ನಿದ್ರೆಯಲ್ಲೂ ಪ್ರವಾಹದ ಕನವರಿಕೆ

ವಿಜಯಕುಮಾರ್ ಎಸ್.ಕೆ.
Published 16 ಸೆಪ್ಟೆಂಬರ್ 2020, 20:32 IST
Last Updated 16 ಸೆಪ್ಟೆಂಬರ್ 2020, 20:32 IST
ಒತ್ತುವರಿಯಿಂದ ಕಿರಿದಾಗಿರುವ ರಾಜಕಾಲುವೆ –ಪ್ರಜಾವಾಣಿ ಚಿತ್ರ
ಒತ್ತುವರಿಯಿಂದ ಕಿರಿದಾಗಿರುವ ರಾಜಕಾಲುವೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ತೆರವಾಗದ ರಾಜಕಾಲುವೆ, ನಿರ್ಮಾಣವಾಗದ ತಡೆಗೋಡೆ, ಮಳೆ ಬಂದಾಗಲೆಲ್ಲಾ ಮನೆಗೆ ತುಂಬಿಕೊಳ್ಳುವ ನೀರು, ನಿದ್ರೆಯಲ್ಲೂ ಪ್ರವಾಹದ ಕನವರಿಕೆ...

ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಚೊಕ್ಕಸಂದ್ರ, ದಾಸರಹಳ್ಳಿ, ಮಾರುತಿನಗರ, ರುಕ್ಮಿಣಿನಗರ, ಬೆಲ್ಮಾರ್ ಲೇಔಟ್‌ ಸುತ್ತಮುತ್ತಲ ಪ್ರದೇಶದ ಜನರನ್ನು ಬಿಡದೆ ಕಾಡುತ್ತಿರುವ ಸಮಸ್ಯೆ.

ಆಕಾಶದಲ್ಲಿ ಮೋಡಕಟ್ಟಿಮಳೆ ಬರುವ ವಾತಾವರಣ ನಿರ್ಮಾಣವಾದರೆ ಈ ಪ್ರದೇಶದ ಜನರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಜೋರು ಮಳೆ ಬಂದರೆ ನೀರು ನುಗ್ಗುವ ಭಯದಲ್ಲಿ ಅರೆನಿದ್ರೆಯಲ್ಲೇ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಮಳೆ ಬಂದರೆ ಇಡೀ ರಾತ್ರಿ ಜಾಗರಣೆಯೇ ಗತಿ.

ADVERTISEMENT

ಈ ಪ್ರದೇಶದ ಜನರಿಗೆಇದು ಇಂದು ನಿನ್ನೆಯ ಸಮಸ್ಯೆಯಲ್ಲ. ವರ್ಷಗಟ್ಟಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 2019ರಅ.9ರಂದು ರಾತ್ರಿ ಚೊಕ್ಕಸಂದ್ರ ಕೆರೆ ಕೋಡಿ ಒಡೆದ ಬಳಿಕ ಮನೆಗಳಿಗೆ ನುಗ್ಗಿದ ನೀರು ಎಂಟನೇ ಮೈಲಿ ಸುತ್ತಮುತ್ತಲ ಮಾರುತಿ ಬಡಾವಣೆ, ಬೆಲ್ಮಾರ್ ಲೇಔಟ್‌, ಮಾರುತಿ ಬಡಾವಣೆ, ರುಕ್ಮಿಣಿ ನಗರದ ಜನರ ನಿದ್ರೆಗೆಡಿಸಿತ್ತು. ಅದಾದ ನಂತರ ಆಗಾಗ ಈ ಸಮಸ್ಯೆ ಉದ್ಭವಿಸುತ್ತಲೇ ಇದ್ದು, ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಯೂ ಜನರನ್ನು ಜಾಗರಣೆ ಮಾಡಿಸಿತು. ಮನೆಗಳಿಗೆ ನುಗ್ಗಿದ ನೀರು ಅಪಾರ ಪ್ರಮಾಣದ ಹಾನಿ ಉಂಟು ಮಾಡಿತು.

‘ಚೊಕ್ಕಸಂದ್ರ ಕೆರೆ ಕೋಡಿ ಬಿದ್ದರೆ ಆ ನೀರು ದೊಡ್ಡಬಿದರಕಲ್ಲು ಕೆರೆ ಸೇರುತ್ತದೆ. ನೆಲಗದರನಹಳ್ಳಿ ಕಡೆಯಿಂದ ಬರುವ ರಾಜಕಾಲುವೆಯೂ ಇದಕ್ಕೆ ಸೇರಿಕೊಂಡು ಹರಿಯುತ್ತದೆ. ಎರಡೂ ರಾಜಕಾಲುವೆಗಳಿಗೆ ತಡೆಗೋಡೆಗಳಿಲ್ಲ. ಕೆಲವೆಡೆ ರಾಜಕಾಲುವೆಯೇ ಮಾಯವಾಗಿದ್ದರೆ, ಹಲವೆಡೆ ಚರಂಡಿಯಷ್ಟು ಸಣ್ಣದಾಗಿವೆ. ಹೀಗಾಗಿ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ರಾಜಕಾಲುವೆಯನ್ನೇ ನುಂಗುವ ರೀತಿಯಲ್ಲಿ ಒತ್ತುವರಿ ಮಾಡಿಕಾಂಪೌಂಡ್‌ ನಿರ್ಮಿಸಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವ ಧೈರ್ಯವನ್ನು ಬಿಬಿಎಂಪಿ ತೋರಿಸಿಲ್ಲ. ಇದರಿಂದಾಗಿ ಇಡೀ ಬಡಾವಣೆ ಜನರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆನೀರಿನ ಜತೆಗೆ ರಾಜಕಾಲುವೆಯಲ್ಲಿ ಹರಿಯುವ ಒಳಚರಂಡಿ ನೀರು ಮತ್ತು ಮಣ್ಣಿನ ರಾಶಿಯೂ ಮನೆಗಳನ್ನು ತುಂಬಿಕೊಳ್ಳುತ್ತದೆ.ಹಾವು, ಚೇಳುಗಳೂ ಮನೆಗೆ ಬರುತ್ತಿವೆ. ಮಳೆಗಾಲದಲ್ಲಿ ನಿತ್ಯವೂ ಎದುರಿಸುತ್ತಿರುವ ಈ ಸಮಸ್ಯೆ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ’ ಎಂದು ರುಕ್ಮಿಣಿನಗರದ ಜೋಡಿಬಾವಿ ರಸ್ತೆಯ ಮುನಿರತ್ನಾ ಕಣ್ಣೀರು ಹಾಕಿದರು.

ಪದೇ ಪದೇ ಎದುರಾಗುವ ಸಮಸ್ಯೆಯಿಂದ ರೋಸಿ ಹೋಗಿರುವ ಇಲ್ಲಿನ ಜನರು ಕಳೆದ ವಾರ ಮಳೆ ಸುರಿದ ಮರುದಿನ ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸಿದರು. ಅದಾದ ಬಳಿಕನೆಲಗದರನಹಳ್ಳಿ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದ್ದ ಸೇತುವೆಯನ್ನು ಬಿಬಿಎಂಪಿ ಅಧಿಕಾರಿಗಳೇ ಕೆಡವಿದ್ದಾರೆ.

‘ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಇದರಿಂದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ. ಒತ್ತುವರಿ ತೆರವುಗೊಳಿಸಿ ತಡೆಗೋಡೆ ನಿರ್ಮಾಣ ಮಾಡುವುದೊಂದೇ ಪರಿಹಾರ’ ಎಂದು ಬೆಲ್ಮಾರ್ ಲೇಔಟ್‌ನ ಕುಮಾರ್ ಹೇಳಿದರು.

‘ಸರ್ಕಾರಕ್ಕೆ ಕಾಳಜಿ ಇಲ್ಲ’

‘ಕಳೆದ ವಾರ ಮಳೆ ಸುರಿದಾಗ ಎರಡೂವರೆ ಸಾವಿರದಿಂದ ಮೂರು ಸಾವಿರ ಮನೆಗಳಿಗೆ ನೀರು ನುಗ್ಗಿತ್ತು. ಸಮಸ್ಯೆ ಬಗೆಹರಿಸಲು ಸರ್ಕಾರ ಕಾಳಜಿ ವಹಿಸುತ್ತಿಲ್ಲ’ ಎಂದು ಶಾಸಕ ಆರ್.ಮಂಜುನಾಥ್ ಆರೋಪಿಸಿದರು.

‘ಕೆಲವು ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ನೀಡಿ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ. ಈ ಭಾಗದ ಜನರು ಮಳೆಯಿಂದ ಅನುಭವಿಸುತ್ತಿರುವ ಸಮಸ್ಯೆಯೇ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ಬಿಬಿಎಂಪಿ ಆಯುಕ್ತರನ್ನು ಕರೆತಂದು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದೇನೆ. ತಡೆಗೋಡೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ’ ಎಂದರು.

’ಮಳೆ ಸಂತ್ರಸ್ತರಿಗೆ ತಲಾ ₹5 ಸಾವಿರ ಪರಿಹಾರ ನೀಡಲು ಸರ್ಕಾರ ಒಪ್ಪಿದ್ದು, 700 ಮಂದಿ ಅರ್ಜಿ ಸಲ್ಲಿಸಿದ್ದಾರೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.