ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ(ಡಿಡಿಯುಟಿಟಿಎಲ್) ನಡೆದಿದ್ದ ₹47.10 ಕೋಟಿ ಅಕ್ರಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾಗಿ ಹಾಗೂ ಡಿಡಿಯುಟಿಟಿಎಲ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಎಸ್.ಶಂಕರಪ್ಪ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.
2021ರ ನವೆಂಬರ್ 15ರಿಂದ 2022ರ ಜುಲೈ 11ರ ವರೆಗೆ ಶಂಕರಪ್ಪ ಅವರು ನಿಯೋಜನೆ ಮೇರೆಗೆ ಡಿಡಿಯುಟಿಟಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಶಂಕರಪ್ಪ ಅವರನ್ನು ಮೇ 27ರಂದು ಸಿಐಡಿ ಬಂಧಿಸಿತ್ತು.
‘ಡಿಡಿಯುಟಿಟಿಎಲ್ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಿತ್ತು. ಶಂಕರಪ್ಪ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 19(ಬಿ) ಮತ್ತು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) 1973ರ ಸೆಕ್ಷನ್ 197(1)(ಬಿ) ಪ್ರಕಾರ ಸಕ್ಷಮ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
‘ಶಂಕರಪ್ಪ ಅವರು ಡಿಡಿಯುಟಿಟಿಎಲ್‌ನಲ್ಲಿ ಕೆಲಸ ಮಾಡಿದ್ದ ಅವಧಿಯಲ್ಲಿ ಪ್ರಕರಣದ ಎರಡನೇ ಆರೋಪಿಯೊಂದಿಗೆ ಶಾಮೀಲಾಗಿ ಅಪರಾಧಿಕ ಒಳಸಂಚು ರೂಪಿಸಿದ್ದರು. ಕರಡು ನಡವಳಿಗಳಲ್ಲಿ ‘ಅಧ್ಯಕ್ಷರು ಸೂಚಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಿ ನಿರ್ಣಯಿಸಲಾಯಿತು’ ಎಂಬ ಹೆಚ್ಚುವರಿ ವಾಕ್ಯ ಸೇರಿಸಿ ಅಕ್ರಮ ಕಾಮಗಾರಿ ನಡೆಸಲು ವ್ಯವಸ್ಥಿತ ಸಂಚು ರೂಪಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿತ್ತು.
‘ಅಕ್ರಮ ನಡಾವಳಿಯನ್ನು ಆಕ್ಷೇಪಿಸದೇ ಕಂಪನಿಯ ಹಣವನ್ನು ದುರುಪಯೋಗ ಮಾಡುವ ಉದ್ದೇಶದಿಂದ ಒಂದೇ ಕಾಮಗಾರಿಯನ್ನು ₹5 ಲಕ್ಷ ಮೌಲ್ಯದಂತೆ ಹಲವು ಭಾಗಗಳಾಗಿ ವಿಂಗಡಿಸಿ ಕಚೇರಿ ಹಂತದಲ್ಲಿ ತುಂಡು ಗುತ್ತಿಗೆಗಳಿಗೆ ದರಪಟ್ಟಿ ಆಹ್ವಾನಿಸಿ ತೋರ್ಪಡಿಕೆಗೆ ಪಟ್ಟಿ ತಯಾರಿಸಿದ್ದರು. ಅಕ್ರಮ ಗಳಿಕೆಯ ಉದ್ದೇಶದಿಂದ ಕಂಪನಿಯಲ್ಲಿನ 668 ಕಾಮಗಾರಿಗಳನ್ನು ಎಸ್.ಎಸ್.ಎಂಟರ್‌ಪ್ರೈಸಸ್, ವೆನಿಷಾ ಎಂಟರ್‌ಪ್ರೈಸಸ್, ಮಯೂರ್ ಅಡ್ವರ್‌ಟೈಸಿಂಗ್, ಆರ್‌ಜಿಸಿ ಕನ್ಸ್‌ಟ್ರಕ್ಷನ್, ಆ್ಯಡ್ ಪ್ರಿಂಟ್ಸ್, ಇನ್ನೋವೇಟಿವ್ ಅಕಾಡೆಮಿಗೆ ಕಂಪನಿಯ 668 ಕಾಮಗಾರಿ ವಹಿಸಲಾಗಿತ್ತು. ಅರ್ಹತೆ ಹಾಗೂ ಅನುಭವವಿಲ್ಲದ ಮೂರು ಗುತ್ತಿಗೆದಾರರಿಗೆ ₹39.25 ಕೋಟಿ ಮೌಲ್ಯದ 665 ಕಾಮಗಾರಿಗಳನ್ನು ಅಕ್ರಮವಾಗಿ ವಹಿಸಲಾಗಿತ್ತು’ ಎಂದು ವಿವರಿಸಲಾಗಿತ್ತು.
‘ಶಂಕರಪ್ಪ ಅವರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ನೆಪ ಮಾತ್ರಕ್ಕೆ ಅನೇಕ ಕಡತಗಳನ್ನು ರಚಿಸಿದ್ದರು. ವಿಷಯ ಮರೆಮಾಚಲು ವಿಜಯನಗರ ಬಡಾವಣೆಯಲ್ಲಿ ಖಾಸಗಿ ಕಚೇರಿಯಲ್ಲಿ ಕಡತಗಳ ಟಿಪ್ಪಣಿ ಹಾಗೂ ಹಣ ಪಾವತಿ ಆದೇಶ ತಯಾರು ಮಾಡಿದ್ದರು’ ಎಂದು ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.