ADVERTISEMENT

ಕಟ್ಟಡ ಕಾರ್ಮಿಕ ಸಾವು: ಶೋಭಾ ಡೆವಲಪರ್ಸ್ ಮಾಲೀಕನ ವಿರುದ್ಧ ಎಫ್‌ಐಆರ್‌

ಶೋಭಾ ಡೆವಲಪರ್ಸ್ ಮಾಲೀಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:29 IST
Last Updated 1 ನವೆಂಬರ್ 2019, 10:29 IST

ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಶೋಭಾ ಡೆವಲಪರ್ಸ್ ಕಟ್ಟಡದಲ್ಲಿ 30 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ರಾಮ್‌ ಸಿಕಿಲ್ ಮಂಡಲ್ (29) ಎಂಬುವರು ಮೃತಪಟ್ಟಿದ್ದಾರೆ.

‘ಅ. 29ರಂದು ನಡೆದಿರುವ ಘಟನೆ ಸಂಬಂಧ ಕಟ್ಟಡದ ಎಲೆಕ್ಟ್ರಿಷಿಯನ್ ನಿಗಮ್ನಂದನಾಯಕ್ ದೂರು ನೀಡಿದ್ದಾರೆ. ನಿರ್ಲಕ್ಷ್ಯ ಆರೋಪದಡಿ ಶೋಭಾ ಡೆವಲಪರ್ಸ್ ಮಾಲೀಕ, ಕಟ್ಟಡದ ಮ್ಯಾನೇಜರ್ ಅನಿಲ್ ಹಾಗೂ ಎಲೆಕ್ಟ್ರಿಷಿಯನ್ ವಿಭಾಗದ ಮುಖ್ಯಸ್ಥ ರಾಮ್ ಕುಮಾರ್ ತಂಗವೇಲು ವಿರು‌ದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೃತ ರಾಮ್, ಶೋಭಾ ಡೆವಲಪರ್ಸ್‌ನ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಎರಡು ವರ್ಷಗಳಿಂದ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.ಚರ್ಚ್‌ಸ್ಟ್ರೀಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ದೀಪಗಳನ್ನು ಅಳವಡಿಸುತ್ತಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

ADVERTISEMENT

‘ಎಲೆಕ್ಟ್ರಿಷಿಯನ್ ನಿಗಮ್ ನಂದನಾಯಕ್ ಹಾಗೂ ಇತರರು ಕೆಳಗೆ ನಿಂತಿದ್ದರು. ಸಣ್ಣ ಗಾತ್ರದ ಕ್ರೇನ್‌ ಬಕೆಟ್‌ನಲ್ಲಿ ಮೇಲಕ್ಕೆ ಹೋಗಿದ್ದ ಕಾರ್ಮಿಕ ರಾಮ್, ದೀಪಗಳನ್ನು ಅಳವಡಿಸುತ್ತಿದ್ದರು. ಅದೇ ವೇಳೆ ಬಕೆಟ್‌ ಕತ್ತರಿಸಿತ್ತು. ಅದರ ಸಮೇತವೇ ರಾಮ್ ಬಿದ್ದಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.