ADVERTISEMENT

ಕೆಂಪೇಗೌಡ ಪ್ರಾಧಿಕಾರ ಕಂದಾಯ ಇಲಾಖೆಗೆ: ವ್ಯಾಪಕ ಚರ್ಚೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 22:06 IST
Last Updated 31 ಅಕ್ಟೋಬರ್ 2022, 22:06 IST
   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ
ಪ್ರಾಧಿಕಾರವನ್ನು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಿಂದ ಕಂದಾಯ ಇಲಾಖೆ ವ್ಯಾಪ್ತಿಗೆ ವಹಿಸಿ ಆದೇಶ ಹೊರಡಿಸಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಾಧಿಕಾರ ವನ್ನು ನಗರಾಭಿವೃದ್ಧಿ ಇಲಾಖೆಯ ಸುಪರ್ದಿಗೆ ನೀಡಲಾಗಿತ್ತು.

ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ರಾಮನಗರ ಜಿಲ್ಲಾಉಸ್ತುವಾರಿ ಸಚಿವ
ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಉಪಾಧ್ಯಕ್ಷರಾಗಿದ್ದರು.

ADVERTISEMENT

ಇದೀಗ ಪ್ರಾಧಿಕಾರ ಕಂದಾಯ ಇಲಾಖೆಗೆ ಬಂದಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿ ಅಧ್ಯಕ್ಷರಾಗಿ ಮತ್ತು ಅಶ್ವತ್ಥನಾರಾಯಣ ಉಪಾಧ್ಯಕ್ಷರಾ ಗಿಯೇ ಮುಂದುವರೆಯುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ರಾಮನಗರ, ಬೆಂಗ ಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಸುತ್ತಮುತ್ತ ಇರುವುದರಿಂದ ನಗರಾಭಿವೃದ್ಧಿ ಇಲಾಖೆಯ ಸುಪರ್ದಿಗೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಂದಾಯ ಸಚಿವ ಆರ್‌.ಅಶೋಕ ಅವರು ‘ಪ್ರಾಧಿಕಾರವನ್ನು ತಮ್ಮ ಇಲಾಖೆಗೆ ನೀಡಬೇಕು’ ಎಂದು ಮುಖ್ಯಮಂತ್ರಿಯವರಲ್ಲಿ ಪಟ್ಟು ಹಿಡಿದ ಕಾರಣ, ಪ್ರಾಧಿಕಾರವನ್ನು ಕಂದಾಯ ಇಲಾಖೆಗೆ ಒಪ್ಪಿಸಿದ್ದಾರೆ. ಇದರಿಂದ ಸಾಂಸ್ಥಿಕ ರಚನೆಯಲ್ಲಿ ಯಾವುದೇ ಬದಲಾವಣೆ ಆಗದೇ ಇದ್ದರೂ, ಕೆಲಸ ಕಾರ್ಯಗಳಲ್ಲಿ ಅನುಮತಿ ಪಡೆಯಲು ತಡವಾಗುವ ಸಾಧ್ಯತೆ ಇರುತ್ತದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ಅಭಿವೃದ್ಧಿಗೆ
ಕೆಂಪೇಗೌಡ ಅವರ ಶ್ರಮವನ್ನು ಪರಿಗಣಿಸಿ, ಬೆಂಗಳೂರು ನಗರದಲ್ಲಿ ಮತ್ತು ಸುತ್ತಮುತ್ತಲಲ್ಲಿ, ಬೆಂಗಳೂರು ಕಂದಾಯ ವಿಭಾಗದ ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಪ್ರಾರಂಪರಿಕ ತಾಣಗಳು, ಪ್ರವಾಸೋದ್ಯಮ ಸ್ಥಳಗಳು ಮತ್ತು ಸ್ಮಾರಕಗಳನ್ನು
ಅಂತರರಾಷ್ಟ್ರೀಯ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಅವುಗಳ ನಿರ್ವಹಣೆಗೆ ಪ್ರಾಧಿಕಾರ ರಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.