ADVERTISEMENT

ಯುವಕನ ಕೊಲೆ ಪ್ರಕರಣ: 11 ವರ್ಷದ ನಂತರ ಅಪರಾಧಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 20:10 IST
Last Updated 25 ಡಿಸೆಂಬರ್ 2021, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೇಶ್ಯಾವಾಟಿಕೆಗೆ ಯುವತಿಯೊಬ್ಬಳನ್ನು ಜೊತೆಗೆ ಕಳುಹಿಸುವುದಾಗಿ ನಂಬಿಸಿ ನವದೆಹಲಿಯ ಸಿದ್ದಾರ್ಥ್‌ ದಾಸ್‌ ಎಂಬುವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ ಅಪರಾಧಿಗಳಿಗೆ ನಗರದ 57ನೇ ಸಿಸಿಎಚ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ಕೆ.ಜಿ.ಚಿಂತಾ ಅವರು ಕಾಮಾಕ್ಷಿಪಾಳ್ಯ ಬಳಿಯ ರಂಗನಾಥಪುರದ ವಿನೋದ್‌ (40) ಹಾಗೂ ಹೊಂಗಸಂದ್ರ ನಿವಾಸಿ ರಾಘವೇಂದ್ರ (20) ಎಂಬುವರಿಗೆ ಶಿಕ್ಷೆಯ ಜೊತೆಗೆ ತಲಾ ₹50 ಸಾವಿರ ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಮೃತ ಯುವಕನ ತಂದೆ ಸುಧಾಮ ದಾಸ್‌ಗೆ ನೀಡುವಂತೆ ನಿರ್ದೇಶಿಸಿದ್ದಾರೆ.

‘ನವದೆಹಲಿಯ ಲೈಟ್‌ ಕ್ರಾಫ್ಟ್‌ ಹೆಸರಿನ ಕಂಪನಿಯಲ್ಲಿ ಮಾರುಕಟ್ಟೆ ವಿಭಾಗದ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಾರ್ಥ್‌, ಕಂಪನಿಯ ಕೆಲಸದ ಮೇಲೆ ನಗರದ ಮಂತ್ರಿ ಮಾಲ್‌ಗೆ ಬಂದಿದ್ದರು. ಠಾಣೆ ವ್ಯಾಪ್ತಿಯ ಎಸ್‌.ಸಿ.ರಸ್ತೆಯಲ್ಲಿರುವ ಕರಾವಳಿ ಲಾಡ್ಜ್‌ನ ಕೊಠಡಿ ಸಂಖ್ಯೆ 203ರಲ್ಲಿ ತಂಗಿದ್ದರು. 206ನೇ ಸಂಖ್ಯೆಯ ಕೊಠಡಿಯಲ್ಲಿ ಆತನ ಸಹೋದ್ಯೋಗಿಗಳಿಬ್ಬರು ಉಳಿದುಕೊಂಡಿದ್ದರು’ ಎಂದು ಶೇಷಾದ್ರಿಪುರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘2010ರ ಮಾರ್ಚ್‌ 26ರಂದು ರಾತ್ರಿ 8.30ರ ಸುಮಾರಿಗೆ ಸಿದ್ದಾರ್ಥ್‌ ಹಾಗೂ ಆತನ ಸಹೋದ್ಯೋಗಿ ಬಿ.ವಿ.ಕೆ.ಅಯ್ಯಂಗಾರ್‌ ರಸ್ತೆಯ ಅಭಿನಯ ಚಿತ್ರಮಂದಿರದ ಮುಂದೆ ನಿಂತಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಅಪರಾಧಿವಿನೋದ್‌, ಅವರ ಬಳಿ ಹೋಗಿ ತನ್ನನ್ನು ಪರಿಚಯಿಸಿಕೊಂಡಿದ್ದ. ವೇಶ್ಯಾವಾಟಿಕೆಗೆ ಯುವತಿಯರನ್ನು ಕೊಡಿಸುವುದಾಗಿ ಆಸೆ ತೋರಿಸಿ ಪುಸಲಾಯಿಸಿದ್ದ ಆತ, ಇಬ್ಬರನ್ನೂ ಆಟೊದಲ್ಲಿ ಕರೆದುಕೊಂಡು ಸ್ಯಾಂಕಿ ರಸ್ತೆಯತ್ತ ಸಾಗಿದ್ದ. ಅಲ್ಲಿ ಇಬ್ಬರನ್ನೂ ಬೇರ್ಪಡಿಸಿದ್ದ’ ಎಂದು ವಿವರಿಸಲಾಗಿದೆ.

‘ಸಿದ್ದಾರ್ಥ್‌ನನ್ನು ಪ್ಯಾಲೇಸ್‌ ಮೈದಾನದಲ್ಲಿ ಕರೆದುಕೊಂಡು ಹೋಗಿದ್ದ ವಿನೋದ್‌ ಬಳಿಕ ಮೊಬೈಲ್ ಕಿತ್ತುಕೊಂಡಿದ್ದ. ಈ ವೇಳೆ ರಾಘವೇಂದ್ರ ಸ್ಥಳಕ್ಕೆ ಬಂದಿದ್ದ. ಇಬ್ಬರೂ ಚಾಕು ತೋರಿಸಿ ಸಿದ್ದಾರ್ಥ್‌ ಬಳಿ ಇದ್ದ ಹಣ, ಎಟಿಎಂ ಕಾರ್ಡ್‌ ಕಸಿದುಕೊಂಡಿದ್ದರು. ಬಳಿಕ ಸಿದ್ದಾರ್ಥ್‌ ಮೊಬೈಲ್‌ನಿಂದಲೇ ಲಾಡ್ಜ್‌ಗೆ ಕರೆಮಾಡಿ ಅಲ್ಲಿನ ಸಿಬ್ಬಂದಿಯಿಂದ ಎಟಿಎಂ ಕಾರ್ಡ್‌ನ ಪಿನ್‌ ನಂಬರ್‌ ಪಡೆದುಕೊಂಡಿದ್ದರು. ನಂತರ ಅಪರಾಧಿಯೊಬ್ಬ ಎಟಿಎಂ ಕೇಂದ್ರಕ್ಕೆ ಹೋಗಿ ಪಿನ್‌ ನಂಬರ್‌ ಸರಿ ಇದೆಯೊ ಇಲ್ಲವೊ ಎಂದು ಪರಿಶೀಲಿಸಿದ್ದ. ಅದು ಸರಿ ಇದೆ ಎಂಬುದು ಖಾತರಿಯಾದ ನಂತರ ಹಗ್ಗದಿಂದ ಸಿದ್ದಾರ್ಥ್‌ನ ಕುತ್ತಿಗೆ ಬಿಗಿದು ಸಾಯಿಸಿದ್ದರು. ಬಳಿಕ ಅಲ್ಲೇ ಇದ್ದೆ ಕಟ್ಟಿಗೆಗಳ ಮೇಲೆ ಶವ ಇಟ್ಟು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದರು. ನಂತರ ಎಟಿಎಂ ಕಾರ್ಡ್‌ ಬಳಸಿ ₹73 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.