ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ವಿಳಾಸ ತಪ್ಪಾಗಿದ್ದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗ್ರಾಹಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಜೆಪ್ಟೊ ಕಂಪನಿಯ ಡೆಲಿವರಿ ಯುವಕ ವಿಷ್ಣುವರ್ಧನ್ ಎಂಬಾತನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಹಕ ಶಶಾಂಕ್ ಅವರ ದೂರು ಆಧರಿಸಿ ಯುವಕನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಸಾಮಗ್ರಿ ತೆಗೆದುಕೊಳ್ಳಲು ಬಂದ ಮಹಿಳೆಯನ್ನು ತಪ್ಪು ವಿಳಾಸ ಏಕೆ ನೀಡಿದ್ದೀರಿ ಎಂದು ಪ್ರಶ್ನಿಸಿದೆ. ಈ ವಿಚಾರಕ್ಕೆ ನಮ್ಮ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಆಗ ಬಂದ ಶಶಾಂಕ್ ಅವರು ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಹಲ್ಲೆಗೆ ಮುಂದಾದರು. ಆಗ ಗಲಾಟೆಗೆ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ್ದೇನೆ ಹೊರತು ದುರುದ್ದೇಶದಿಂದ ಹಲ್ಲೆ ಮಾಡಿಲ್ಲ’ ಎಂದು ವಿಷ್ಣುವರ್ಧನ್ ವಿಚಾರಣೆಗೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂಬುದು ಗೊತ್ತಾಗಿದೆ.
ಕಣ್ಣಿನ ಎಡಭಾಗದ ಕೆಳಗೆ ಪೆಟ್ಟು ಬಿದ್ದಿದ್ದರಿಂದ ರಾಜಾಜಿನಗರದ ನೇತ್ರಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಶಶಾಂಕ್ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆ ಹಾಜರುಪಡಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್ ಅವರು ಶಶಾಂಕ್ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
‘ಈ ಘಟನೆಯು ಆಘಾತಕಾರಿ ಮತ್ತು ಒಪ್ಪುವಂತಹದಲ್ಲ. ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ತನಿಖೆಗೆ ಅಗತ್ಯ ಸಹಕಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜೆಪ‍್ಟೊ ಕಂಪನಿ ಹೇಳಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.