ಬೆಂಗಳೂರು: ಲೋಕಾಯುಕ್ತ ಪೊಲೀಸರ ಭ್ರಷ್ಟಾಚಾರ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾಗಿರುವ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
‘ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆಯೇ ಅಕ್ರಮಗಳಲ್ಲಿ ಸಿಲುಕುತ್ತಿದೆ. ಸಂಸ್ಥೆಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗುತ್ತಿವೆ. ಭ್ರಷ್ಟಾಚಾರದ ಪ್ರಕರಣಗಳು ಕೂಡ ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಲೋಕಾಯುಕ್ತ ಸಂಸ್ಥೆಯಲ್ಲಿನ ಅಕ್ರಮಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ರಾಜೀನಾಮೆ ಪಡೆಯಬೇಕು ಅಥವಾ ಅವರನ್ನು ವಜಾ ಮಾಡಲು ಕ್ರಮ ವಹಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
‘ಲೋಕಾಯುಕ್ತ ಪೊಲೀಸರಿಗೆ ಅಬಕಾರಿ ಅಧಿಕಾರಿಗಳು ಪ್ರತಿ ತಿಂಗಳು ಲಂಚ ನೀಡುತ್ತಿರುವುದು ಮತ್ತು ಆರೋಪಿಗಳೊಂದಿಗೆ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರಗೆ ಸಂಪರ್ಕವಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಲೋಕಾಯುಕ್ತ ಸಂಸ್ಥೆ ಬಲಪಡಿಸಲು ಮತ್ತು ಅದರ ಘನತೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು‘ ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ‘ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದರೂ ವಿರೋಧ ಪಕ್ಷಗಳು ತುಟಿ ಬಿಚ್ಚುತ್ತಿಲ್ಲ. ಕಾಂಗ್ರೆಸ್ ಜೊತೆಗೆ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಪಕ್ಷದ ವತಿಯಿಂದ ಈವರೆಗೂ ರಾಜ್ಯದಾದ್ಯಂತ ನೂರಾರು ಅಕ್ರಮಗಳ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ’ ಎಂದರು.
ಇದೇ ವೇಳೆ ವಿಧಾನಸೌಧ ಚಲೋ ಹೊರಟ ಪಕ್ಷದ ಕಾರ್ಯಕರ್ತರನ್ನು ಪೊಲೀಸರು, ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಆಗ ಕಾರ್ಯಕರ್ತರು ಪೊಲೀಸರ ಕಾಲಿಗೆ ಬಿದ್ದು, ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ ಪ್ರಸಂಗವೂ ನಡೆಯಿತು.
ಪ್ರತಿಭಟನೆಯಲ್ಲಿ ಪಕ್ಷದ ಉಪಾಧ್ಯಕ್ಷರಾದ ಎಸ್. ಮಂಜುನಾಥ್, ರಘು ಜಾಣಗೆರೆ, ಜ್ಞಾನ ಸಿಂಧು ಸ್ವಾಮಿ, ಸೋಮಸುಂದರ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ರಘುನಂದನ, ವಿ.ಬಿ.ಕೃಷ್ಣ, ಯುವ ಘಟಕದ ಅಧ್ಯಕ್ಷ ಜನನಿ ವತ್ಸಲ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಪ. ಯ. ಗಣೇಶ್, ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.