ಬೆಂಗಳೂರು: ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಪ್ರತಿವರ್ಷ ₹200 ಕೋಟಿ ಅನುದಾನ ಬಿಡುಗಡೆ ಮಾಡುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಜೈನ ಸಮಾಜ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಜೈನ ಸಮುದಾಯದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭವಾಯಿತು.
‘ಅಲ್ಪಸಂಖ್ಯಾತರಿಗೆ ಇರುವ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಜೈನ ಸಮುದಾಯಕ್ಕೆ ಕೊಡುವುದರಲ್ಲಿ ರಾಜ್ಯ ಸರ್ಕಾರವು ತಾರತಮ್ಯ ಎಸಗುತ್ತಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬೇಡಿಕೆಗಳನ್ನು ಈಡೇರಿಸಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು, ಬೆಳಗಾವಿ, ತುಮಕೂರು ಸೇರಿ ವಿವಿಧ ಭಾಗದಿಂದ ಬಂದವರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವು ಇದುವರೆಗೂ ಜೈನ ಸಮುದಾಯಕ್ಕೆ ಲಭಿಸಿಲ್ಲ. ಅಧ್ಯಕ್ಷ ಸ್ಥಾನವನ್ನು ಜೈನ ಸಮುದಾಯಕ್ಕೆ ನೀಡಬೇಕು. ನಿಗಮದ ಅಧ್ಯಕ್ಷ ಸ್ಥಾನ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೂ ಸಿಗುವಂತೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ಜೈನ ಸಮುದಾಯಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಶೇಕಡ 20ಕ್ಕೆ ಹೆಚ್ಚಿಸಬೇಕು. ಪ್ರಾಚೀನ ಜೈನ ಬಸದಿ ಮತ್ತು ಬಸದಿಗಳ ಆಸ್ತಿಗಳ ಸಂರಕ್ಷಣೆಗಾಗಿ ಕಾನೂನು ರೂಪಿಸಬೇಕು. ಎಲ್ಲ ಪ್ರಾಚೀನ ಬಸದಿ ಮತ್ತು ಆಸ್ತಿಗಳ ಭೂಮಾಪನ ಮಾಡಬೇಕು. ಅತಿಕ್ರಮಣ ತೆರವು ಮಾಡಲು ವಿಶೇಷ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಇರುವ ಎಲ್ಲ ಪ್ರಾಚೀನ ಜೈನ ಬಸದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಕ್ರೈಸ್ತ ಧರ್ಮೀಯರ ಅಭಿವೃದ್ಧಿಗೆ ಪ್ರತಿವರ್ಷ ₹250 ಕೋಟಿಯನ್ನು ಸರ್ಕಾರ ಮಂಜೂರು ಮಾಡುತ್ತಿದೆ. ಜೈನರ ಬೇಡಿಕೆಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿದರು.
ಪ್ರತಿಭಟನೆಯ ನೇತೃತ್ವವನ್ನು ರೇಣುಕಾ ರಂಕ, ಬಾಬುಬಾಯ್ ಮೆಹ್ತಾ, ಕವಿತಾ ಜೈನ್, ಇಂದ್ರಮಲ್ ನಹರ್, ಮಹೇಶ್ ಜೈನ್ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.