ADVERTISEMENT

ಎಸ್‌.ಟಿ ಮೀಸಲಾತಿ ಹೆಚ್ಚಳಕ್ಕೆ ಸಿ.ಎಂ.ಗೆ ಮನವಿ

ಮಹರ್ಷಿ ವಾಲ್ಮೀಕಿ ಸ್ವಾಮೀಜಿ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 20:56 IST
Last Updated 29 ಜುಲೈ 2020, 20:56 IST
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ   

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಹಾಗೂ ಈ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು ಎಂಬ ವಿಷಯದಲ್ಲಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲು ಈ ಸಮುದಾಯದ ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ.

ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಶಾಸಕರು ಪಕ್ಷಭೇದ ಮರೆತು ಪಾಲ್ಗೊಂಡಿದ್ದರು. ಸಭೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿದ ನಿಯೋಗ, ಹಕ್ಕೊತ್ತಾಯವನ್ನು ಸಲ್ಲಿಸಿತು.

ಪರಿವಾರ–ತಳವಾರ ಸಮುದಾಯದರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವ ಬಗ್ಗೆಯೂ ಸಭೆ ಚರ್ಚಿಸಿತು. ಪರಿವಾರ–ತಳವಾರ ಎರಡೂ ಹೆಸರು ವಾಲ್ಮೀಕಿ ಸಮುದಾಯದ ಪರ್ಯಾಯ ಹೆಸರುಗಳಾಗಿವೆ. ಹೀಗಾಗಿ ಮೀಸಲಾತಿ ಬಗ್ಗೆ ಸಮುದಾಯದವರು ಆತಂಕ ಪಡುವ ಅಗತ್ಯವಿಲ್ಲ ಎಂಬ ಚರ್ಚೆ ಸಭೆಯಲ್ಲಿ ನಡೆಯಿತು. ಸಚಿವ ಗೋವಿಂದ ಕಾರಜೋಳ ಅವರ ಜತೆ ಸಮಾಲೋಚನೆ ನಡೆಸಿದಾಗ ಈ ವಿಷಯದಲ್ಲಿದ್ದ ಗೊಂದಲ ಬಗೆಹರಿಸಿಕೊಳ್ಳಲಾಯಿತು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಿಳಿಸಿದೆ.

ADVERTISEMENT

ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಜವಾಬ್ದಾರಿ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸಮುದಾಯದ ಸಚಿವರು, ಶಾಸಕರಿಗೆ ವಹಿಸಲು ನಿರ್ಣಯಿಸಲಾಯಿತು ಎಂದು ಮಹಾಸಭಾ ತಿಳಿಸಿದೆ.

ಸಭೆಯಲ್ಲಿ ಸಚಿವರಾದ ಬಿ. ಶ್ರೀರಾಮುಲು, ರಮೇಶ ಜಾರಕಿಹೊಳಿ, ಸಂಸದ ದೇವೇಂದ್ರಪ್ಪ, ಶಾಸಕರಾದ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಾಜೂಗೌಡ, ಶಿವನಗೌಡ ನಾಯಕ, ಎಸ್.ವಿ. ರಾಮಚಂದ್ರಪ್ಪ, ಟಿ.ರಘುಮೂರ್ತಿ, ಕಂಪ್ಲಿ ಗಣೇಶ್‌, ಬಸವನಗೌಡ ದದ್ದಲ್, ಸೋಮಲಿಂಗಪ್ಪ, ಬಿ. ನಾಗೇಂದ್ರ, ಎನ್‌.ವೈ. ಗೋಪಾಲಕೃಷ್ಣ, ಇ. ತುಕಾರಾಂ, ಅನಿಲ್ ಚಿಕ್ಕಮಾದು,ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ ಹಾಗೂ ಮಹಾಸಭಾದ ಅಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.