ADVERTISEMENT

ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕೆ. ರವೀಂದ್ರ ಶೆಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 14:56 IST
Last Updated 4 ನವೆಂಬರ್ 2023, 14:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಹಿಂದುಳಿದಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದಲ್ಲಿ 46 ಜಾತಿಗಳಿದ್ದು, 75 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಶೇ 95ರಷ್ಟು ಜನ ನಿರ್ಗತಿಕರಾಗಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇವರೆಲ್ಲರೂ ನಿವೇಶನ ರಹಿತರಾಗಿದ್ದು, ಡೇರೆ, ಟೆಂಟ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನ ಸಿಗುತ್ತಿಲ್ಲ’ ಎಂದು ದೂರಿದರು. 

ADVERTISEMENT

‘ಪ್ರತಿ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯ ಭವನ, ರುದ್ರಭೂಮಿಗೆ ಸ್ಥಳ ಗುರುತಿಸಬೇಕು. ನಿಗಮದಿಂದ ದೊರೆಯುವ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ, ಉದ್ಯಮಶೀಲತಾ ತರಬೇತಿ ಕಾರ್ಯಕ್ರಮಗಳನ್ನು ನೈಜ ಫಲಾನುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ 10ರಿಂದ 20 ವರ್ಷಗಳಿಂದ ಟೆಂಟ್‌ ಹಾಕಿಕೊಂಡು ವಾಸಿಸುತ್ತಿರುವ ಈ ಜನಾಂಗದವರಿಗೆ ಆ ಭೂಮಿಯನ್ನು ಅವರ ಹೆಸರಿಗೆ ಮಾಡಬೇಕು. ಅಲೆಮಾರಿ ಜನಾಂಗದ ಮಕ್ಕಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವಾಗ ಅವರ ಜಾತಿ ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಎಂದು ನಮೂದಿಸಲು ಸರ್ಕಾರ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.