ADVERTISEMENT

ಮೋದಿ ಹೆಸರಲ್ಲಿ ಕೇಂದ್ರೀಕರಣಗೊಳ್ಳುತ್ತಿರುವ ಪ್ರಜಾಪ್ರಭುತ್ವ: ಕೆ.ಪ್ರಕಾಶ್

‘ಒಕ್ಕೂಟವೋ ತಿಕ್ಕಾಟವೋ’ ವಿಚಾರ ಸಂಕಿರಣದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:54 IST
Last Updated 3 ಮೇ 2025, 16:54 IST
<div class="paragraphs"><p>ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್</p></div>

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್

   

ಬೆಂಗಳೂರು: ಪ್ರಜಾಪ್ರಭುತ್ವವು ನರೇಂದ್ರ ಮೋದಿ ಹೆಸರಿನಲ್ಲಿ ಕೇಂದ್ರೀಕರಣಗೊಳ್ಳುತ್ತಿದೆ. ಇಲ್ಲಿ ಮೋದಿ ಮುಖವಾಡ ಮಾತ್ರ. ಕೇಂದ್ರೀಕರಣಗೊಳಿಸುತ್ತಿರುವವರು ಬಂಡವಾಳಶಾಹಿಗಳು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್‌ ತಿಳಿಸಿದರು.

ಕ್ರಿಯಾ ಮಾಧ್ಯಮ ಶನಿವಾರ ಆಯೋಜಿಸಿದ್ದ ಶ್ರೀಪಾದ್ ಭಟ್ ಅವರ ‘ಒಕ್ಕೂಟವೋ ತಿಕ್ಕಾಟವೋ’ ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ-ಅಗಲ ಕೃತಿ ಬಿಡುಗಡೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ADVERTISEMENT

ಬಂಡವಾಳಶಾಹಿಗಳು ಹೆಚ್ಚು ಬಲಿಷ್ಠವಾಗಿದ್ದಾರೆ. ದೇಶವೇ ಕೇಂದ್ರೀಕೃತ ಮಾರುಕಟ್ಟೆಯಾಗಬೇಕು. ದೊಡ್ಡ ಮಾರುಕಟ್ಟೆಯಲ್ಲಿ ದೊಡ್ಡ ಲಾಭ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಆಳುವ ವರ್ಗಕ್ಕೆ ಭಿನ್ನ ಸಂಸ್ಕೃತಿಗಳ ಮಾರುಕಟ್ಟೆ ಬೇಡವಾಗಿದ್ದು, ಏಕ ಸಂಸ್ಕೃತಿ, ಏಕ ತೆರಿಗೆ, ಎಲ್ಲವೂ ಏಕ ಆಗುವುದನ್ನು ಬಯಸುತ್ತದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸಂಬಂಧವು ವಿಕೇಂದ್ರೀಕರಣ ತತ್ವದಲ್ಲಿ ಅಡಗಿದೆ. ಆದರೆ, ರಾಜ್ಯಗಳಿಗೆ ಇರುವ ಅಧಿಕಾರವನ್ನು ಕೇಂದ್ರವು ಇಲ್ಲದಂತೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯಗಳ ಅಧಿಕಾರದ ಹಂಚಿಕೆ ಮಾತ್ರ ಪ್ರಶ್ನೆಯಾಗಿ ಉಳಿದಿಲ್ಲ. ರಾಜ್ಯಗಳು ಜಿಲ್ಲೆಗಳ ನಡುವೆ, ಜಿಲ್ಲೆಗಳು ಗ್ರಾಮಗಳ ಜೊತೆಗೆ ಯಾವ ರೀತಿ ವಿಕೇಂದ್ರೀಕೃತ ಸಂಬಂಧ ಇಟ್ಟುಕೊಂಡಿವೆ ಎನ್ನುವುದು ಕೂಡ ಚರ್ಚೆಯಾಗಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಚರ್ಚೆಯಲ್ಲಿ ಒಕ್ಕೂಟ ತತ್ವ ಒಳಗೊಂಡಂತಾಗುತ್ತದೆ ಎಂದು ತಿಳಿಸಿದರು.

ಪತ್ರಕರ್ತ ಡಿ. ಉಮಾಪತಿ ಮಾತನಾಡಿ, ‘ಸರ್ವಾಧಿಕಾರಿಗಳು ಅಧಿಕಾರಕ್ಕೆ ಬಂದರೆ ಮೊದಲು ಅವರು ಕೈ ಹಾಕುವುದು ಶಿಕ್ಷಣಕ್ಕೆ. ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಶಿಕ್ಷಣ ಇಲಾಖೆಯನ್ನು ಯಾರು ನಿರ್ವಹಿಸಿದರು? ಈಗ ಯಾರ ಕೈಯಲ್ಲಿದೆ? ಅವರ ಆದ್ಯತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವರ್ಣಾಶ್ರಮ ಧರ್ಮವನ್ನು ಮತ್ತೆ ಪ್ರತಿಷ್ಠಾಪನೆ ಮಾಡುವುದು ಅವರ ಉದ್ದೇಶ ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕೃತಿಕಾರ ಕೆ. ಶ್ರೀಪಾದ್ ಭಟ್, ಹೋರಾಟಗಾರ್ತಿ ಕೆ.ಎಸ್. ವಿಮಲಾ, ವಸಂತರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.