ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಬಿಕ್ಕಟ್ಟಿಗೆ ಪರಿಹಾರವಾಗಿ ದೇಸಿ ತಳಿಗಳನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕಿದೆ’ ಎಂದು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ ಅಭಿಪ್ರಾಯಪಟ್ಟರು.
ಕೃಷಿ ತಂತ್ರಜ್ಞರ ಸಂಸ್ಥೆ(ಐಎಟಿ), ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗದ ಜತೆಗೂಡಿ ‘ಕ್ರಾಪ್ಸ್4ಎಚ್ಡಿ’ ಹಾಗೂ ‘ಕೀ ಸ್ಟೋನ್’ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ದೇಸಿ ಬೀಜೋತ್ಸವ’ದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಅಧಿಕ ರಾಸಾಯನಿಕ ಹಾಗೂ ನೀರಿನ ಅತಿಯಾದ ಬಳಕೆಯಿಂದ ರಾಜ್ಯದ 24 ಕೋಟಿ ಹೆಕ್ಟೇರ್ ಜಮೀನು ಸವಳಾಗಿದೆ. ಹೈಬ್ರಿಡ್ ತಳಿಗಳಿಂದ ಆಹಾರ ಉತ್ಪಾದನೆ ಹೆಚ್ಚಿದರೂ, ಪೌಷ್ಟಿಕಾಂಶದ ಕೊರತೆ ಕಾಡುತ್ತಿದೆ. ಈ ಕೊರತೆಗೆ ದೇಸಿ ತಳಿಗಳು ಪರಿಹಾರ ಒದಗಿಸುತ್ತವೆ’ ಎಂದು ಅವರು ಪ್ರತಿಪಾದಿಸಿದರು.
‘ಏಕಬೆಳೆ ವಿಧಾನ ಅಕ್ಕಡಿ ಪದ್ಧತಿಯಂಥ ಸಾಂಪ್ರದಾಯಿಕ ಪದ್ಧತಿಗಳು ಕಾಣೆಯಾಗಿವೆ. ಬೇಸಾಯದ 240 ಬೆಳೆಗಳ ಪೈಕಿ ಈಗ ಬಹುತೇಕ ಕಡೆ ಕಾಣುವುದು ಕೇವಲ 20 ಬೆಳೆಗಳು. ಕುಟುಂಬಕ್ಕೆ ಆಹಾರ ಮತ್ತು ಪೋಷಕಾಂಶ ಭದ್ರತೆ ಕೊಡುವ ದೇಸಿ ತಳಿಗಳು ಮತ್ತು ಅದಕ್ಕೆ ಸಂಬಂಧಿಸಿದ ಪಾರಂಪರಿಕ ವಿಧಾನಗಳನ್ನು ಮತ್ತೆ ಮುನ್ನಲೆಗೆ ತರಬೇಕು’ ಎಂದರು.
‘ಸ್ವಿಸ್ ಏಡ್’ ಸಂಸ್ಥೆಯ ಪ್ರತಿನಿಧಿ ಕವಿತಾ ಗಾಂಧಿ, ‘ಸಹಜ ಸಮೃದ್ಧ ಸಾವಯವ ರೈತ ಉತ್ಪಾದಕ ಕಂಪನಿ’ಯ ಅಧ್ಯಕ್ಷ ಎನ್.ಆರ್. ಶೆಟ್ಟಿ, ದೇಸಿ ತಳಿಗಳ ಬೀಜ ಸಂರಕ್ಷಕ ಸತ್ಯನಾರಾಯಣ ಬೆಲೇರಿ, ಆರ್.ಆರ್.ಎ. ನೆಟ್ವರ್ಕ್ ಸಂಯೋಜಕಿ ಭಾಗ್ಯಲಕ್ಷ್ಮೀ ಹಾಗೂ ಐಎಟಿ ಕಾರ್ಯಕ್ರಮ ಉಪ ಸಮಿತಿ ಅಧ್ಯಕ್ಷ ಎಸ್.ಬಿ. ಯೋಗಾನಂದ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.