ADVERTISEMENT

ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಬಂಧನ

ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಒಪ್ಪಿಗೆ ನೀಡಲು ₹ 1.80 ಲಕ್ಷ ಲಂಚ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 21:45 IST
Last Updated 3 ಡಿಸೆಂಬರ್ 2020, 21:45 IST
ಸಂತೋಷ್‌
ಸಂತೋಷ್‌   

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಖಾಸಗಿ ಸಂಸ್ಥೆಯೊಂದಕ್ಕೆ ತಾತ್ಕಾಲಿಕವಾಗಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲು ₹ 1.80 ಲಕ್ಷ ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಪ್ರಧಾನ ಕಚೇರಿಯ ಸಹಾಯಕ ಆಯುಕ್ತ ಮತ್ತು ನಿವೃತ್ತ ಕಾರ್ಮಿಕ ನಿರೀಕ್ಷಕರೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿರುವ ಕಾರ್ಮಿಕ ಭವನದ ವಿಭಾಗ–3ರ ಸಹಾಯಕ ಆಯುಕ್ತ ಸಂತೋಷ್‌ ಹಿಪ್ಪರಗಿ ಮತ್ತು ನಿವೃತ್ತ ಕಾರ್ಮಿಕ ನಿರೀಕ್ಷಕ ಶಿವಕುಮಾರ್‌ ಬಂಧಿತರು. ಇಬ್ಬರೂ ಕಾರ್ಮಿಕ ಭವನದ ಕಚೇರಿಯಲ್ಲಿ ಬುಧವಾರ ಸಂಜೆ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡ ಬಂಧಿಸಿದೆ. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಾಲೂರಿನ ಖಾಸಗಿ ಸಂಸ್ಥೆಗೆ ದಿನಗೂಲಿ ಕಾರ್ಮಿಕರ ಕೊರತೆ ಎದುರಾಗಿತ್ತು. ದಿನಗೂಲಿ ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕರು 2017ರ ಜನವರಿಯಲ್ಲಿ ಕಾರ್ಮಿಕ ಭವನದಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮೂರು ವರ್ಷಗಳಿಂದ ಅನುಮತಿ ನೀಡದೆ ಸತಾಯಿಸುತ್ತಿದ್ದರು.

ADVERTISEMENT

ಕೆಲವು ದಿನಗಳ ಹಿಂದೆ ಕಂಪನಿಯ ಉಪ ಪ್ರಧಾನ ವ್ಯವಸ್ಥಾಪಕರು ಸಂತೋಷ್‌ ಹಿಪ್ಪರಗಿ ಅವರನ್ನು ಭೇಟಿ ಮಾಡಿ, ಅನುಮತಿ ನೀಡುವಂತೆ ಕೋರಿದ್ದರು. ₹ 2 ಲಕ್ಷ ಲಂಚ ನೀಡು
ವಂತೆ ಅಧಿಕಾರಿ ಬೇಡಿಕೆ ಇರಿಸಿದ್ದರು. ಈ ಕುರಿತು ಅವರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. ನಂತರ ಆರೋಪಿತ ಅಧಿಕಾರಿ ಮತ್ತು ದೂರುದಾರರ ನಡುವೆ ಮಾತುಕತೆ ನಡೆದಿತ್ತು. ₹ 1.80 ಲಕ್ಷವನ್ನು ಬುಧವಾರ ಕಚೇರಿಗೆ ತಲುಪಿಸುವಂತೆ ಸೂಚಿಸಿದ್ದರು.

ಬುಧವಾರ ಸಂಜೆ ಕಾರ್ಮಿಕರ ಭವನಕ್ಕೆ ತೆರಳಿದ ದೂರುದಾರ ಹಣ ತಂದಿರುವುದಾಗಿ ಸಂತೋಷ್‌ ಹಿಪ್ಪರಗಿಗೆ ತಿಳಿಸಿದರು. ಅಲ್ಲಿಯೇ ಇದ್ದ ಶಿವಕುಮಾರ್‌ ಬಳಿ ನೀಡುವಂತೆ ಅವರು ಸೂಚಿಸಿದರು. ಸಹಾಯಕ ಆಯುಕ್ತರ ಸೂಚನೆಯಂತೆ ನಿವೃತ್ತ ಅಧಿಕಾರಿ ಲಂಚದ ಹಣ ಪಡೆದರು. ತಕ್ಷಣ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದರು.

ಮನೆಯಲ್ಲಿ ₹ 10.5ಲಕ್ಷ ಪತ್ತೆ: ಸಂತೋಷ್‌ ಹಿಪ್ಪರಗಿ ಅವರ ಮನೆಯ ಮೇಲೂ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡ ಶೋಧ ನಡೆಸಿದೆ. ₹ 12 ಲಕ್ಷ ನಗದು ಮತ್ತು ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ವ್ಯಕ್ತಿಗಳಿಂದ ಪಡೆದಿದ್ದ ಹಣವನ್ನು ಲಕೋಟೆಗಳಲ್ಲಿ ಇರಿಸಲಾಗಿತ್ತು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಐಜಿಪಿ ಎಂ. ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.