ADVERTISEMENT

ನಗರದ ಅಭಿವೃದ್ಧಿ ನಮ್ಮ ಕರ್ತವ್ಯ, ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:14 IST
Last Updated 27 ಜೂನ್ 2025, 16:14 IST
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಭವನದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಬಾಲಕೃಷ್ಣ, ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಶಿವರಾಜ ತಂಗಡಗಿ, ಮುನಿರತ್ನ, ಪುಟ್ಟಣ್ಣ, ಡಿ.ಕೆ. ಸುರೇಶ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಭವನದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಬಾಲಕೃಷ್ಣ, ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಶಿವರಾಜ ತಂಗಡಗಿ, ಮುನಿರತ್ನ, ಪುಟ್ಟಣ್ಣ, ಡಿ.ಕೆ. ಸುರೇಶ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ‘ಬೆಂಗಳೂರು ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ನಗರದ ಅಭಿವೃದ್ಧಿ ಕನಸನ್ನು ನನಸಾಗಿಸಲು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಬಿಎಂಪಿ ಹಾಗೂ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಂಪಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದ ಕಾಲದಲ್ಲಿ ಅದರಿಂದ ಪ್ರೇರಣೆಗೊಂಡ ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿಪಡಿಸಿದರು.  ಅವರು, 500 ವರ್ಷಗಳ ಹಿಂದೆಯೇ ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ದೂರದೃಷ್ಟಿ ಹೊಂದಿದ್ದ ಮುತ್ಸದ್ದಿ ನಾಯಕ. ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಅವರೇ ಮೂಲ ಕಾರಣ. ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟ್ ಅಪ್ ರಾಜಧಾನಿಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರವಾಗಿದ್ದರೆ ಅದಕ್ಕೆ ಅಡಿಪಾಯ ಹಾಕಿದವರು ಕೆಂಪೇಗೌಡರು’ ಎಂದರು.

ADVERTISEMENT

‘ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲು 2017ರಲ್ಲಿ ನಮ್ಮ ಸರ್ಕಾರ ತೀರ್ಮಾನಿಸಿತ್ತು.  ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿ ಕಾರ್ಯವನ್ನು ಸರ್ಕಾರ ಕೈಗೆತ್ತಿಗೊಂಡಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ನಮ್ಮ ಸರ್ಕಾರ. ಕೆಂಪೇಗೌಡ ಭವನಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದು, ಕಟ್ಟಡವನ್ನು ನಾವೇ ಉದ್ಘಾಟಿಸುತ್ತೇವೆ’ ಎಂದು ಹೇಳಿದರು.

‘ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ’ಯನ್ನು ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಾಲ್ ವರ್ಮಾ ಅವರಿಗೆ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ, ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ  ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಸಚಿವರಾದ ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ ಉಪಸ್ಥಿತರಿದ್ದರು.

ಪ್ರತಿಮೆಗಳಿಗೆ ಮಾಲಾರ್ಪಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಎದುರು ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ಎಚ್‌.ಸಿ. ಮಹದೇವಪ್ಪ ಶಿವರಾಜ್ ತಂಗಡಗಿ ಶಾಸಕರಾದ ವಿಜಯಾನಂದ ಕಾಶಪ್ಪನವರ ಬಸನಗೌಡ ದದ್ದಲ್ ಉಪಸ್ಥಿತರಿದ್ದರು. ಉಪ ಮುಖ್ಯಮಂತ್ರಿ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.  ಬಿಬಿಎಂಪಿ ಕೇಂದ್ರ ಕಚೇರಿ ಸಮೀಪ ಇರುವ ಕೆಂಪೇಗೌಡರ ಪ್ರತಿಮೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರತಿಮೆಗೆ ಡಿ.ಕೆ.ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಭಾಗವಹಿಸಿದ್ದರು.

7 ಭಾಗದಿಂದ ‘ಪುರಜ್ಯೋತಿ’ ನಗರದ ನಾಲ್ಕು ದಿಕ್ಕುಗಳಲ್ಲಿರುವ (ಲಾಲ್ ಬಾಗ್ ಮೇಕ್ರಿ ವೃತ್ತ ಕೆಂಪಾಂಬುದಿ ಕೆರೆ ಹಾಗೂ ಹಲಸೂರು) ಗಡಿ ಗೋಪುರ ಹಾಗೂ ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಆವತಿ ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ತರಿ ದುರ್ಗದಿಂದ ಶುಕ್ರವಾರ ಬೆಳಿಗ್ಗೆ ‘ಪುರಜ್ಯೋತಿ’ ಹೊರಟು ಸುಮನಹಳ್ಳಿ ವೃತ್ತದ ಬಳಿಯ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬಂದು ಸೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.