ADVERTISEMENT

ಡಿಜಿಟಲ್‌ ಮೌಲ್ಯಮಾಪನ ಪ್ರಶ್ನಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ತರಾಟೆ

ಕೆಪಿಎಸ್‌ಸಿ 2015ರ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 7:30 IST
Last Updated 29 ಫೆಬ್ರುವರಿ 2020, 7:30 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ‘ಎ’ ಮತ್ತು ’ಬಿ’ ಶ್ರೇಣಿಯ ಹುದ್ದೆಗಳ ನೇಮಕಾತಿಗೆ ಅನುಸರಿಸಲಾದ ಡಿಜಿಟಲ್ ಮೌಲ್ಯಮಾಪನ ಮಾದರಿ ಆಕ್ಷೇಪಿಸಿ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್‌ ಕಿಡಿ ಕಾರಿದೆ.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಕಾಂತರಾಜ್‌ ಅವರಿಗೆ ನ್ಯಾಯ
ಪೀಠ, ‘ಡಿಜಿಟಿಲ್ ಮೌಲ್ಯಮಾಪನ ಪದ್ದತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ನೀವೇನು ಡಿಜಿಟಲ್ ವ್ಯವಸ್ಥೆಯ ತಜ್ಞರೇ’ ಎಂದು ಪ್ರಶ್ನಿಸಿತು.

‘ತಪ್ಪು ಅಥವಾ ಅಕ್ರಮ ನಡೆದಿರುವ ಸಾಧ್ಯತೆಗಳಿವೆ ಎಂದು ಊಹಿಸಿಕೊಂಡು ಅಂತಹ ಊಹೆಗಳ ಆಧಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಪ್ರವೃತ್ತಿ ಕೊನೆಯಾಗಬೇಕು. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ನ್ಯಾಯವ್ಯಾಪ್ತಿಯ ದುರಪಯೋಗ. ಅಂತೆಯೇ ಈ ಅರ್ಜಿ ದಂಡ ಹಾಕಲು ಅರ್ಹವಾದ ಪ್ರಕರಣವಾಗಿದೆ. ಅರ್ಜಿ ವಾಪಸು ಪಡೆಯಿರಿ ಇಲ್ಲವೇ ದಂಡ ಹಾಕಲಾಗುವುದು’ ಎಂದು ಎಚ್ಚರಿಸಿತು.

ADVERTISEMENT

ಇದಕ್ಕೆ ಕಾಂತರಾಜ್‌, ಅರ್ಜಿ ವಾಪಸು ಪಡೆಯುವುದಾಗಿ ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.