ADVERTISEMENT

‘ಅನರ್ಹ’ರ ಕೈಗೆ ರಾಜ್ಯದ ಖಜಾನೆ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:25 IST
Last Updated 8 ನವೆಂಬರ್ 2019, 19:25 IST
   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರನ್ನು ಓಲೈಸುವ ಸಲುವಾಗಿ ರಾಜ್ಯದ ಖಜಾನೆಯನ್ನೇ ಅವರ ಕೈಗೆ ಕೊಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಕ್ರವಾರ ಆರೋಪಿಸಿದರು.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ನೂರಾರು ಕೋಟಿ ಅನುದಾನ ನೀಡುತ್ತಿದ್ದು, ಇತರ ಕ್ಷೇತ್ರಗಳ ಶಾಸಕರನ್ನು ನಿರ್ಲಕ್ಷ್ಯಿಸಿದ್ದಾರೆ.ಹಿಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷಗಳ ಶಾಸಕ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕಡಿತ ಮಾಡಿ ಅನರ್ಹ 17 ಶಾಸಕರ ಕ್ಷೇತ್ರಗಳಿಗೆ ಕೊಡುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿಲ್ಲ. ವಿರೋಧ ಪಕ್ಷದವರ ಜತೆಗೆ ತಮ್ಮ ಪಕ್ಷದ ಶಾಸಕರಿಗೂ ಯಡಿಯೂರಪ್ಪ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬೇರೆ ಯಾವ ಕ್ಷೇತ್ರಗಳ ಅಭಿವೃದ್ಧಿಯೂ ಬೇಕಾಗಿಲ್ಲ. ಕೇವಲ ಅನರ್ಹ ಶಾಸಕರ ಕ್ಷೇತ್ರಗಳಷ್ಟೇ ಮುಖ್ಯಮಂತ್ರಿ ಕಣ್ಣಿಗೆ ಕಾಣುತ್ತಿವೆ. ಎಲ್ಲರನ್ನೂ ನಿರ್ಲಕ್ಷ್ಯಿಸಿ, ಅನರ್ಹರ ಹಿತ ಕಾಪಾಡುತ್ತಿದ್ದಾರೆ. ಈ ರೀತಿಯ ರಾಜಕಾರಣವನ್ನು ಎಂದೂ ನೋಡಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿಯವರಿಗೆ ಅಭಿವೃದ್ಧಿಗಿಂತ ಅಧಿಕಾರದಾಹ ಹೆಚ್ಚಾಗಿದೆ. ಹಣ ಮಾಡುವುದು, ಚುನಾವಣೆಯಲ್ಲಿ ಗೆಲ್ಲುವುದು, ಅಧಿಕಾರದಲ್ಲಿ ಇರುವುದಷ್ಟೇ ಅವರ ಸಿದ್ಧಾಂತವಾಗಿದೆ. ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಯಡಿಯೂರಪ್ಪ ಅವರು ಅವಾಂತರಗಳನ್ನೇ ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿ ಮೇಲೆ ಪಕ್ಷದ ಕೇಂದ್ರ ನಾಯಕರಿಗೆ ವಿಶ್ವಾಸ ಇಲ್ಲವಾಗಿದ್ದು, ರಾಜ್ಯದಲ್ಲೂ ಪಕ್ಷದಕೆಲ ನಾಯಕರುರಾಜ್ಯ ಘಟಕದ ಅಧ್ಯಕ್ಷರ ಜತೆಗೆ ಸೇರಿಕೊಂಡು ಅವರನ್ನು ಮುಗಿಸಲು ಹೊರಟಿದ್ದಾರೆ ಎಂದು ಅವರು ದೂರಿದರು.

‘ಆಡಳಿತವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ. ನೆರೆ ಸಂತ್ರಸ್ತರ ಬಗ್ಗೆಯೂ ಕಾಳಜಿ ಇಲ್ಲವಾಗಿದೆ. ರಾಜ್ಯಕ್ಕೆ ಇಂತಹ ದುರ್ಗತಿ ಎಂದೂ ಬಂದಿರಲಿಲ್ಲ. ಈ ರೀತಿಯ ಆಡಳಿತ ನಡೆಸುವ ಬದಲು ಚುನಾವಣೆಗೆ ಹೋಗುವುದೇ ಒಳಿತು’ ಎಂದು ಒತ್ತಾಯಿಸಿದರು.

ಕಪಿಲ್ ಸಿಬಲ್ ಸಭೆ
ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ವಿಚಾರದಲ್ಲಿ ಕಾಂಗ್ರೆಸ್‌ ಪರ ವಾದಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಬೆಂಗಳೂರಿಗೆ ಶನಿವಾರ ಭೇಟಿ ನೀಡಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಪಕ್ಷದ ಪ್ರಮುಖರು, ಕಾನೂನು ತಜ್ಞರ ಜತೆಗೆ ಸಿಬಲ್ ಚರ್ಚೆ ನಡೆಸಲಿದ್ದಾರೆ. ವಿಧಾನಸಭಾಧ್ಯಕ್ಷರ ಆದೇಶವನ್ನು ಕೋರ್ಟ್ ಎತ್ತಿಹಿಡಿದರೆ ಹೋರಾಟಕ್ಕೆ ಜಯಸಿಕ್ಕಂತಾಗುತ್ತದೆ. ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ಏನು ಮಾಡಬೇಕು, ಮುಂದಿನ ದಾರಿಗಳೇನು? ಎಂಬ ಬಗ್ಗೆ ಪ್ರಮುಖವಾಗಿ ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.