ADVERTISEMENT

ಹ್ಯಾಕರ್‌ ಶ್ರೀಕಿ ಸಹೋದರನ ಅರ್ಜಿ: ಎಲ್‌ಒಸಿ ವಿವರ ಸಲ್ಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:35 IST
Last Updated 4 ಫೆಬ್ರುವರಿ 2022, 19:35 IST

ಬೆಂಗಳೂರು: ’ಹ್ಯಾಕರ್‌ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಅವರ ಸಹೋದರ ಸುದರ್ಶನ್ ರಮೇಶ್ ವಿರುದ್ಧ ಹೊರಡಿಸಲಾಗಿರುವ ‘ಲುಕ್‌ಔಟ್ ಸರ್ಕ್ಯೂಲರ್’ಗೆ (ಎಲ್‌ಒಸಿ) ಸಂಬಂಧಿಸಿದ ಮೂಲ ದಾಖಲೆಗಳನ್ನುಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ‘ ಎಂದು ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

’ನನ್ನ ವಿದೇಶ ಪ್ರವಾಸಕ್ಕೆಜಾರಿ ನಿರ್ದೇಶನಾಲಯ (ಇ.ಡಿ) ನಿರ್ಬಂಧ ಹೇರಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿ ಸುದರ್ಶನ್ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ’ಲುಕ್ ಔಟ್ ಸರ್ಕ್ಯೂಲರ್ ಗೋಪ್ಯ ದಾಖಲೆಯಾಗಿದ್ದು ನಮಗೆ ಇದರ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೇ 12ರೊಳಗೆ ನಮ್ಮ ಕಕ್ಷಿದಾರರು ನೆದರ್‌ಲ್ಯಾಂಡ್‌ಗೆ ಹೋಗದಿದ್ದರೆ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಇದಕ್ಕೆ ನ್ಯಾಯಪೀಠ, ಕೇಂದ್ರದ ಪರ ವಕೀಲ ಆದಿತ್ಯ ಸಿಂಗ್‌ ಅವರಿಗೆ,’ಲುಕ್‌ಔಟ್ ಸರ್ಕ್ಯೂಲರ್ ಮಾಹಿತಿ, ಅರ್ಜಿದಾರರ ಪರ ವಕೀಲರಿಗೆ ಇಲ್ಲವಾದರೆ ಅವರು ಅದನ್ನು ಪ್ರಶ್ನಿಸುವುದಾದರೂ ಹೇಗೆ. ಎಲ್‌ಒಸಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿ‘ ಎಂದು ನಿರ್ದೇಶಿಸಿ ಇದೇ 16ಕ್ಕೆ ವಿಚಾರಣೆ ಮುಂದೂಡಿತು. ಜಾರಿ ನಿರ್ದೇಶನಾಲಯದ ಪರ ವಕೀಲ ಪಿ. ಪ್ರಸನ್ನಕುಮಾರ್ ವಾದ
ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.