ಬೆಂಗಳೂರು: ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಗರಿಕ ಸೌಲಭ್ಯ (ಸಿಎ) ನಿವೇಶನವನ್ನು ಗುತ್ತಿಗೆ ಮೊತ್ತದ ಶೇ 5ರಷ್ಟು ಪಾವತಿಸಿಕೊಂಡು ಕರಾರು ಪತ್ರ ನೋಂದಾಯಿಸಿಕೊಡಲು ನಗರಾಭಿವೃದ್ಧಿ ಇಲಾಖೆ ಬಿಡಿಎಗೆ ಆದೇಶಿಸಿದೆ.
ಸರ್ ಎಂ. ವಿಶ್ವೇಶ್ವರಯ್ಯ (ಎಸ್‌ಎಂವಿ) ಬಡಾವಣೆಯ ಒಂದನೇ ಬ್ಲಾಕ್‌ನಲ್ಲಿ ಸರ್ಕಾರಿ ಕಾಲೇಜಿಗೆ ಮೀಸಲಾಗಿದ್ದ ಸಂಖ್ಯೆ 3ರ ನಾಗರಿಕ ಸೌಲಭ್ಯ (ಸಿಎ) ನಿವೇಶನಕ್ಕೆ (19,109.91 ಚದರ ಮೀಟರ್) ₹3.35 ಕೋಟಿ ಜಿಎಸ್‌ಟಿ ಸೇರಿದಂತೆ ಒಂದೇ ಕಂತಿನಲ್ಲಿ ₹21.98 ಕೋಟಿ ಪಾವತಿಸಲು ಬಿಡಿಎ ಹಂಚಿಕೆ ಪತ್ರ ನೀಡಿತ್ತು.
ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿಶೇಷ ಪ್ರಕರಣವೆಂದು ಭಾವಿಸಿ, ಗುತ್ತಿಗೆ ಮೌಲ್ಯದಲ್ಲಿ ವಿನಾಯಿತಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಪರಿಗಣಿಸಿ, ಗುತ್ತಿಗೆ ಮೌಲ್ಯದ ಶೇ 5ರಷ್ಟು ಮೊತ್ತ (₹1.09 ಕೋಟಿ+ ₹57,330 ಜಿಎಸ್‌ಟಿ) ಪಾವತಿಸಿಕೊಂಡು ಕರಾರು ಮಾಡಿಕೊಡಲು ಸಚಿವ ಸಂಪುಟದಲ್ಲಿ ಜೂನ್ 5ರಂದು ನಿರ್ಣಯಿಸಲಾಗಿದೆ. ಅದರಂತೆ ನಗರಾಭಿವೃದ್ಧಿ ಇಲಾಖೆ ಜೂನ್ 12ರಂದು ಆದೇಶ ಹೊರಡಿಸಿದೆ.
ಎರಡು ದಶಕದ ಹಿಂದೆ ಬಿಡಿಎ ನಿರ್ಮಿಸಿರುವ ಎಸ್‌ಎಂವಿ ಬಡಾವಣೆಯ ಸರ್ಕಾರಿ ಕಾಲೇಜಿಗಾಗಿ ಮೀಸಲಿಡಲಾಗಿರುವ ಸಿಎ ನಿವೇಶನವನ್ನು ಶಿಕ್ಷಣ ಇಲಾಖೆಗೆ ಬಿಡಿಎ ಹಂಚಿಕೆ ಮಾಡಿಲ್ಲ ಎಂದು ‘ಪ್ರಜಾವಾಣಿ’ಯ 2024ರ ಅಕ್ಟೋಬರ್ 3ರ ಸಂಚಿಕೆಯಲ್ಲಿ ‘ಕಾಲೇಜಿಗೆ ನಿವೇಶನ ನೀಡಲು ನಿರ್ಲಕ್ಷ್ಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದಾದ ನಂತರ, ಬಿಡಿಎ ಅಕ್ಟೋಬರ್ 8ರಂದು ಹಂಚಿಕೆ ಪತ್ರ ನೀಡಿ, ಪ್ರತಿ ಚದರ ಮೀಟರ್‌ಗೆ ₹9,750 ದರ ವಿಧಿಸಿ, ಒಂದೇ ಕಂತಿನಲ್ಲಿ ₹21.98 ಕೋಟಿ ಪಾವತಿಸಲು ಸೂಚಿಸಿತ್ತು.
‘ಸರ್ಕಾರಿ ಕಾಲೇಜಿಗಾಗಿ ಮೀಸಲಿಟ್ಟಿರುವ ಸಿಎ ನಿವೇಶನಕ್ಕೆ ಮಾರುಕಟ್ಟೆ ದರದಲ್ಲಿ ಹಂಚಿಕೆ ಪತ್ರ ನೀಡಿರುವುದು ಸರಿಯಲ್ಲ’ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್ ದೂರಿದ್ದರು.
‘ಸರ್ಕಾರಿ ಕಾಲೇಜಿನ ನಿವೇಶನಕ್ಕೆ ಕಾಲೇಜು ಶಿಕ್ಷಣ ಇಲಾಖೆ ₹21 ಕೋಟಿ ನೀಡಲು ಸಾಧ್ಯವಿಲ್ಲ, ರಿಯಾಯಿತಿ ನೀಡಬೇಕು’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಳೆದ ಅಕ್ಟೋಬರ್ 15ರಂದು ಪತ್ರ ಬರೆದಿದ್ದರು. ಈ ವಿಷಯ ಜೂನ್ 5ರಂದು ಸಚಿವ ಸಂಪುಟದಲ್ಲಿ ಚರ್ಚೆಯಾಗಿ, ರಿಯಾಯಿತಿ ನೀಡಲು ನಿರ್ಣಯ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.