ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ’

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯ ಡಾ.ಎಂ.ಕೆ. ಶ್ರೀಧರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:35 IST
Last Updated 27 ನವೆಂಬರ್ 2020, 21:35 IST
ಡಾ.ಎಂ.ಕೆ.ಶ್ರೀಧರ್‌
ಡಾ.ಎಂ.ಕೆ.ಶ್ರೀಧರ್‌   

ಬೆಂಗಳೂರು: ‘ಮಕ್ಕಳ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡುನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ’ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯ ಡಾ.ಎಂ.ಕೆ. ಶ್ರೀಧರ್ ತಿಳಿಸಿದರು.

ದಿಶಾ ಭಾರತ್ ಸಂಸ್ಥೆಯು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ‘ವಿಕಸನ–2020’ ಶೀರ್ಷಿಕೆಯಡಿ ಹಮ್ಮಿಕೊಂಡ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಈ ನೀತಿಯು 2040ರವರೆಗೆ ಅನ್ವಯವಾಗಲಿದೆ. 1968ರಲ್ಲಿ ಜಾರಿ ಮಾಡಲಾಗಿದ್ದ ನೀತಿಯು 18 ವರ್ಷಗಳ ವರೆಗೆ ಜಾರಿಯಲ್ಲಿತ್ತು. 34 ವರ್ಷಗಳ ಬಳಿಕ ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದಹೊಸ ಮೈಲುಗಲ್ಲಾಗಿದ್ದು, ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ’ ಎಂದರು.

‘ನೀತಿಯು ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ಪರಿಷ್ಕರಿಸಲಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳು ಪಿಯುಸಿಗೆ ಸೇರಿದ ತಕ್ಷಣ ನಿಗದಿತ ವಿಷಯಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ಬದಲು, ಜ್ಞಾನದ ಎಲ್ಲ ಶಾಖೆಗಳನ್ನು ಪರಿಚಯ ಮಾಡಿಕೊಳ್ಳುವ ಹಾಗೂ ತಾವು ಇಷ್ಟಪಟ್ಟ ವಿಷಯಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಶಾಲಾ ಹಂತದಿಂದಲೇ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ‘ ಎಂದರು.

ADVERTISEMENT

ಶೈಕ್ಷಣಿಕ ಪ್ರಗತಿ: ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ನೂತನ ಶಿಕ್ಷಣ ನೀತಿಯು 21ನೇ ಶತಮಾನದಲ್ಲಿ ನವ ಭಾರತ ನಿರ್ಮಾಣ ಮಾಡುವ ಶಕ್ತಿ ಹೊಂದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿಯೇ ಅತ್ಯುತ್ತಮ ಶಿಕ್ಷಣ ದೊರೆಯಬೇಕೆನ್ನುವುದು ನೀತಿಯ ಆಶಯ. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳ ಆಸಕ್ತಿ ಹಾಗೂ ಪ್ರತಿಭೆಗೆ ಮನ್ನಣೆ ದೊರೆಯಲಿದ್ದು, ವಿವಿಧ ವಿಷಯಗಳನ್ನು ಓದಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಪ್ರಾತಿನಿಧ್ಯ ದೊರೆಯಲಿದೆ. ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಅಧಿಕಾರ ಲಭಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.