ADVERTISEMENT

ಡಿಕೆಶಿ ಗನ್‌ಮ್ಯಾನ್ ಹೆಸರಿನಲ್ಲಿ ವಂಚನೆ; ಬಂಧನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:13 IST
Last Updated 23 ಸೆಪ್ಟೆಂಬರ್ 2019, 19:13 IST
   

ಬೆಂಗಳೂರು: ಶಾಸಕ ಡಿ.ಕೆ. ಶಿವಕುಮಾರ್ ಅವರ ಗನ್‌ಮ್ಯಾನ್ ಎಂದು ಹೇಳಿಕೊಂಡು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದ ಆರೋಪದಡಿಸುನೀಲ್‌ (28) ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ಸುನೀಲ್, ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗೃಹ ರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟದ್ದ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆತ, ಕೆಲಸದ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಹಾಸನದ ಹಳ್ಳಿ ಮೈಸೂರಿನ ಎಚ್‌.ಆರ್. ವೀರಭದ್ರ ಎಂಬುವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಆರೋಪಿ, ₹ 1.30 ಲಕ್ಷ ಪಡೆದಿದ್ದ. ಹಲವು ದಿನಗಳಾದರೂ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸ ನೀಡಿರಲಿಲ್ಲ. ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ. ನೊಂದ ವೀರಭದ್ರ ಇದೇ 18ರಂದು ಠಾಣೆಗೆ ದೂರು ನೀಡಿದ್ದರು.’

ADVERTISEMENT

‘ಆರೋಪಿಯನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೂ ಐವರಿಂದ ಹಣ ಪಡೆದು ವಂಚಿಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಡಿಕೆಶಿ ಜೊತೆ ಫೋಟೊ: ‘ಡಿ.ಕೆ.ಶಿವಕುಮಾರ್ ಅವರ ಜೊತೆಯಲ್ಲಿ ಫೋಟೊ ತೆಗೆಸಿಕೊಂಡಿದ್ದ ಆರೋಪಿ, ಅದನ್ನೇ ಉದ್ಯೋಗಾಕಾಂಕ್ಷಿಗಳಿಗೆ ತೋರಿಸಿ ತಾನು ಗನ್‌ಮ್ಯಾನ್ ಎಂದು ಹೇಳಿ ನಂಬಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಮೆಜೆಸ್ಟಿಕ್‌ನಲ್ಲಿರುವ ಕಬ್ಬಿನ ಹಾಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೂರುದಾರ ವೀರಭದ್ರ ಅವರಿಗೂ ಅದೇ ಫೋಟೊ ತೋರಿಸಿದ್ದ. ಕೆಲಸ ಸಿಗಬಹುದೆಂಬ ಆಸೆಯಿಂದ ವೀರಭದ್ರ ಹಣ ಕೊಟ್ಟಿದ್ದರು. ಕೆಲವೇ ದಿನಗಳಲ್ಲಿ ನೇಮಕಾತಿ ಪತ್ರ ಕೊಡಿಸುವುದಾಗಿ ಆರೋಪಿ ಹೇಳಿದ್ದ. ಆದರೆ, ಯಾವುದೇ ಪತ್ರ ನೀಡಿರಲಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.