ADVERTISEMENT

ವೈದ್ಯನಿಂದ ₹ 1.16 ಕೋಟಿ ಸುಲಿಗೆ: ಮತ್ತೆ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 16:23 IST
Last Updated 1 ಜುಲೈ 2022, 16:23 IST

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದದ ವೈದ್ಯ ಶಂಕರ್ ಬಾಬು ಅವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 1.16 ಕೋಟಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಮತ್ತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಕೆಲವರು, ಹಣ ವಾಪಸು ಕೇಳಿದ್ದಕ್ಕೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ವೈದ್ಯ ಶಂಕರ್ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ಹೊಣೆಯನ್ನು ಸಿಸಿಬಿಗೆ ವಹಿಸಲಾಗಿತ್ತು.

‘ಪ್ರಕರಣದ ತನಿಖೆ ಕೈಗೊಂಡು ಪ್ರಮುಖ ಆರೋಪಿಗಳಾದ ಆಳಂದದ ನಾಗರಾಜ್ ಬೋರುಪಿ, ಬೆಂಗಳೂರಿನ ಮಧು ಹಾಗೂ ಓಂಪ್ರಕಾಶ್ ಎಂಬುವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಇದೀಗ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ಶಂಕರ್ ಅವರ ಮಗನಿಗೆ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಆಮಿಷವೊಡ್ಡಿದ್ದ ಆರೋಪಿಗಳು, ಹಂತ ಹಂತವಾಗಿ ₹ 66 ಲಕ್ಷ ಪಡೆದಿದ್ದರು. ಸೀಟು ಕೊಡಿಸದಿದ್ದಾಗ ಹಣ ವಾಪಸು ನೀಡುವಂತೆ ದೂರುದಾರ ಒತ್ತಾಯಿಸಿದ್ದರು.’

‘ಹಣ ಕೊಡುವುದಾಗಿ ಹೇಳಿ ದೂರುದಾರರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಆರೋಪಿಗಳು, ಮೆಜೆಸ್ಟಿಕ್‌ನಲ್ಲಿರುವ ಯು.ಟಿ ವಸತಿಗೃಹದ ಕೊಠಡಿಯಲ್ಲಿ ಇರಿಸಿದ್ದರು. ಅದೇ ಕೊಠಡಿಗೆ ಕೆಲ ಯುವತಿಯರನ್ನು ಕಳುಹಿಸಿ, ಸಲುಗೆಯಿಂದ ವರ್ತಿಸುವಂತೆ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಫೋಟೊವನ್ನೇ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹ 50 ಲಕ್ಷ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.