ADVERTISEMENT

ದಲಿತರಿಗೆ ಚಪ್ಪಲಿ ಕಾಯುವ ಕೆಲಸ: ಆಕ್ರೋಶದ ಬಳಿಕ ಟೆಂಡರ್ ಪ್ರಕಟಣೆ ರದ್ದು

ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಟೆಂಡರ್ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇವಸ್ಥಾನದ ಆವರಣ ದಲ್ಲಿ ಪೂಜಾ ಸಾಮಗ್ರಿ, ಎಳನೀರು ಮಾರಾಟ, ಸುಂಕ ವಸೂಲಿ ಹಕ್ಕುಗಳು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದರೆ, ಚಪ್ಪಲಿ ಕಾಯ್ದುಕೊಳ್ಳುವ ಹಕ್ಕನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಅ.31ರಂದು ಬಹಿರಂಗ ಹರಾಜು ಪ್ರಕಟಣೆಯಲ್ಲಿ ಈ ರೀತಿ ಮೀಸಲು ನಿಗದಿಪಡಿಸಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಟೆಂಡರ್ ಪ್ರಕಟಣೆಯನ್ನು ಬುಧವಾರ ರದ್ದುಪಡಿಸಲಾಗಿದೆ.

ದೊಡ್ಡಗಣಪತಿ ದೇವಾಲಯಕ್ಕೆ ಬರುವ ಭಕ್ತರ ಪೂಜೆಗಳಿಗೆ ಅನುಕೂಲ ಆಗುವಂತೆ ಪೂಜಾ ಸಾಮಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕು ಸಾಮಾನ್ಯ ವರ್ಗಕ್ಕೆ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್ ಸಾಮಾನ್ಯ ವರ್ಗಕ್ಕೆ, ಎಳನೀರು ಮಾರಾಟ ಮಾಡುವ ಹಕ್ಕಿನ ಟೆಂಡರ್ ಸಾಮಾನ್ಯ ವರ್ಗಕ್ಕೆ ಮತ್ತು ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸ
ಲಾಗಿತ್ತು.

ADVERTISEMENT

ಅದೇ ರೀತಿ ದೊಡ್ಡಬಸವಣ್ಣ ದೇವಾಲಯದಲ್ಲೂ ಮೆರಿ ಗೋ ರೌಂಡ್‌(ಮಕ್ಕಳ ಆಟಿಕೆ) ಮತ್ತು ಸುಂಕ ವಸೂಲಾತಿ ಹಕ್ಕನ್ನು ಸಾಮಾನ್ಯ ವರ್ಗಕ್ಕೆ, ಇಲ್ಲಿಯೂ ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಡಲಾಗಿದೆ. ಕಾರಂಜಿ ಆಂಜನೇಯಸ್ವಾಮಿ ದೇವಾಲಯದ ಖಾಲಿ ಜಾಗದಲ್ಲಿ ಮೆರಿ ಗೋ ರೌಂಡ್‌ ಅಳವಡಿಸುವ ಟೆಂಡರ್ ಕೂಡ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು.

ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ‘ಯಾರು ಏನು ಕೆಲಸ ಮಾಡಬೇಕು ಎಂಬುದನ್ನು ಸರ್ಕಾರ ಅಧಿಕೃತವಾಗಿಯೇ ಘೋಷಣೆ ಮಾಡಿದೆ’ ಎಂಬ ಆಕ್ರೋಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.

ವರದಿ ಕೇಳಿದ ಆಯೋಗ: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಚಪ್ಪಲಿ ಕಾಯುವ ಟೆಂಡರ್ ಮೀಸಲಿರಿಸಿದ್ದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ತಿಳಿಸಿದ್ದಾರೆ.

‘ಈ ಪ್ರಕಟಣೆಯನ್ನು ವಾಪಸ್ ಪಡೆದು ಸರಿಪಡಿಸುವುದಾಗಿ ತಿಳಿಸಿದ್ದರು. ಅದರಂತೆ ಬುಧವಾರ ‍ಪ್ರಕಟಣೆ ವಾಪಸ್ ಪಡೆದಿದ್ದಾರೆ. ಇದು ಸಂತಸದ ವಿಷಯ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.