ಬೆಂಗಳೂರು: ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಐದು ವರ್ಷಗಳಲ್ಲಿ 8.13 ಲಕ್ಷ ಮಂದಿ ನಾಯಿ ಕಡಿತಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆಯು ನಾಯಿ ಕಡಿತವನ್ನು 2021ರಲ್ಲಿ ‘ಘೋಷಿತ ಕಾಯಿಲೆ’ಯ ವ್ಯಾಪ್ತಿಗೆ ತಂದಿದೆ. ಇದರಿಂದಾಗಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಮೂಲಕ ರೇಬಿಸ್ ಕಾಯಿಲೆ ತಡೆಗೂ ಕ್ರಮವಹಿಸಲಾಗಿದೆ. ಎಲ್ಲ ವಯೋಮಾನದವರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳ ದಾಳಿಯಿಂದ ಗಾಯಗೊಳ್ಳುತ್ತಿದ್ದಾರೆ. ಐದು ವರ್ಷಗಳಲ್ಲಿ 11 ಮಂದಿ ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ.
ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾದ ನಾಯಿ ಕಡಿತ ಪ್ರಕರಣಗಳ ಮಾಹಿತಿ ಇಲಾಖೆಗೆ ಸಮರ್ಪಕವಾಗಿ ದೊರೆಯುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳೂ ನಿಯಮಿತವಾಗಿ ಪ್ರಕರಣಗಳ ವಿವರವನ್ನು ಇಲಾಖೆಗೆ ವರದಿ ಮಾಡುತ್ತಿರಲಿಲ್ಲ. ಇದರಿಂದಾಗಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ರೇಬಿಸ್ ಕಾಯಿಲೆಗೆ ಒಳಗಾಗುವವರ ಹಾಗೂ ಕಡಿತದಿಂದ ಮೃತಪಡುವವರ ಸಂಖ್ಯೆ ಹೆಚ್ಚಿತ್ತು. ಆದ್ದರಿಂದ, ನಾಯಿ ಕಡಿತವನ್ನು ‘ಘೋಷಿತ ಕಾಯಿಲೆ’ಯಡಿ ತಂದು, ಎಲ್ಲ ಪ್ರಕರಣಗಳ ವಿವರವನ್ನು ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ (ಐಎಚ್‌ಐಪಿ) ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.
ಎಲ್ಲ ಜಿಲ್ಲೆಗಳಲ್ಲಿ ವರದಿ: ನಾಯಿ ಕಡಿತ ಪ್ರಕರಣಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವರದಿಯಾಗುತ್ತಿವೆ. ಬೆಂಗಳೂರಿನಲ್ಲಿಯೇ ಅಧಿಕ ಪ್ರಕರಣಗಳು ಖಚಿತಪಡುತ್ತಿವೆ. ಐದು ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ (76 ಸಾವಿರ) ಪ್ರಕರಣಗಳು ದೃಢಪಟ್ಟಿವೆ. ನಾಯಿ ಕಡಿತಕ್ಕೆ ಒಳಗಾದವರಿಗೆ ರೇಬಿಸ್ ನಿರೋಧಕ ಲಸಿಕೆಯನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ‘ರೇಬಿಸ್ ಇಮ್ಯುನೋಗ್ಲಾಬ್ಯುಲಿನ್’ ಚುಚ್ಚುಮದ್ದನ್ನು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
‘ಪಶುಸಂಗೋಪನೆ, ಕೃಷಿ, ಅರಣ್ಯ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ನಾಯಿ ಕಡಿತದ ಚಿಕಿತ್ಸೆ ಹಾಗೂ ಸಾವು ತಡೆಗೆ ಕ್ರಮವಹಿಸಲಾಗಿದೆ. ನಾಯಿಗಳಿಗೂ ರೇಬಿಸ್ ಲಸಿಕೆ ಒದಗಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಯೋಜನೆ (ಐಡಿಎಸ್‌ಪಿ) ನಿರ್ದೇಶಕ ಡಾ. ಅನ್ಸರ್ ಅಹಮದ್ ತಿಳಿಸಿದರು.
‘ಚಿಕಿತ್ಸೆ ಪಡೆಯದಿದ್ದಲ್ಲಿ ಅಪಾಯ’
‘ಯಾವುದೇ ನಾಯಿ ಕಚ್ಚಿದರೂ ನಿರ್ಲಕ್ಷ್ಯ ಮಾಡಬಾರದು. ನಾಯಿ ಕಡಿತದಿಂದಲೇ ರೇಬಿಸ್ ಕಾಣಿಸಿಕೊಳ್ಳುವುದು ಜಾಸ್ತಿ. ರೇಬಿಸ್ ಸೋಂಕು ದೇಹದ ನರವ್ಯೂಹ ಸೇರಿದ ಬಳಿಕ ಬಲಿಷ್ಠಗೊಂಡು ವ್ಯಕ್ತಿಯನ್ನು ಗಾಸಿಗೊಳಿಸುತ್ತದೆ. ಹೀಗಾಗಿ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು. ಕಚ್ಚಿದ ಗಾಯವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಬೇಕು. ಸಾಬೂನಿನಿಂದ ಗಾಯವನ್ನು ಶುಭ್ರಗೊಳಿಸಿದಲ್ಲಿ ಸೋಂಕು ದೇಹದ ನರವ್ಯೂಹವನ್ನು ಸೇರುವುದನ್ನು ತಡೆಯಲು ಸಾಧ್ಯವಾಗಲಿದೆ’ ಎಂದು ಡಾ. ಅನ್ಸರ್ ಅಹಮದ್ ತಿಳಿಸಿದರು.
‘ಗಾಯ ದೊಡ್ಡದಾಗಿದ್ದರೆ ಅಥವಾ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಶುದ್ಧ ಬಟ್ಟೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಪಡೆಯಬೇಕು. ಕಚ್ಚಿದ ನಾಯಿ ಮೇಲೆ ಕೂಡ ನಿಗಾ ಇಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾಯಿಯನ್ನು ಸಾಯಿಸಬಾರದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.