ADVERTISEMENT

ಕರ್ನಾಟಕಕ್ಕೆ ಪರ್ಯಾಯ ಜನಪರ ಶಿಕ್ಷಣ ನೀತಿ: ರಾಜ್ಯ ಸಮಾವೇಶದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 18:40 IST
Last Updated 10 ಜನವರಿ 2024, 18:40 IST
‘ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿ’ಯ ಕರಡು ಸಲ್ಲಿಕೆಗಾಗಿ ನಗರದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರಿಗೆ ಶಿಕ್ಷಣ ನೀತಿಯ ಮನವಿ ಪತ್ರ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ
‘ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿ’ಯ ಕರಡು ಸಲ್ಲಿಕೆಗಾಗಿ ನಗರದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರಿಗೆ ಶಿಕ್ಷಣ ನೀತಿಯ ಮನವಿ ಪತ್ರ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಸೃಷ್ಟಿಸಿದ ಗೊಂದಲ ರಾಜ್ಯ ಶಿಕ್ಷಣ ನೀತಿಯಲ್ಲಿ ಇರಬಾರದು. ವಿದ್ಯಾರ್ಥಿಗಳಿಗೆ ಮತ್ತು ವಿದ್ಯೆಗೆ ಪೂರಕವಾಗಿರಬೇಕು ಎಂಬ ಒಕ್ಕೊರಲ ಧ್ವನಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಕೇಳಿಬಂತು.

ಕರ್ನಾಟಕ ಜನಪರ ಶಿಕ್ಷಣ ನೀತಿಯ ಕರಡು ಸಲ್ಲಿಕೆಗಾಗಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಇದಕ್ಕೆ ವೇದಿಕೆಯಾಯಿತು.

ಕರ್ನಾಟಕ ರಾಜ್ಯ ಹೊಸ ಶಿಕ್ಷಣ ನೀತಿಯು ಶಿಕ್ಷಣ ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿ ಇರುವಂತೆ ನೋಡಿಕೊಳ್ಳಬೇಕು. ನುರಿತ ವ್ಯಕ್ತಿಗಳನ್ನು ಸೃಷ್ಟಿಸುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು. ಸೃಜನಶೀಲ ಹಾಗೂ ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿಗಳನ್ನು ಸೃಷ್ಟಿಸುವಂತಿರಬೇಕು. ಕ್ಯೂಬಾ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಉಚಿತ. ಅದೇ ಮಾದರಿಯಲ್ಲಿ ಇಲ್ಲಿಯೂ ಆರೋಗ್ಯ ಮತ್ತು ಶಿಕ್ಷಣವನ್ನು ಸಾರ್ವತ್ರಿಕ ಖಾತ್ರಿಗೊಳಿಸಬೇಕು ಎಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಕುಲಪತಿ ವಿಕ್ಟರ್ ಲೋಬೊ ಒತ್ತಾಯಿಸಿದರು.

ADVERTISEMENT

‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ಪದ್ಧತಿ ಎಂದು ಹೆಸರಿಗಷ್ಟೇ ಹೇಳಲಾಗಿದೆ. ಆದರೆ, ಎಲ್ಲವನ್ನು ಹಿಂದಕ್ಕೆ ಒಯ್ಯುವ ಮಾರ್ಗ ಇದಾಗಿದೆ. ಎನ್‌ಇಪಿ ಜಾರಿಯಾದ ಮೇಲೆ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಡಿಪ್ಲೊಮಾ ಮತ್ತು ನರ್ಸ್‌ ಕೋರ್ಸ್‌ಗಳಿಗೆ ಪ್ರವೇಶ ಹೆಚ್ಚಾಗಿದೆ ಎಂದು ಉಪನ್ಯಾಸಕಿ ಸಬಿತಾ ಬನ್ನಾಡಿ ತಿಳಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣಕ್ರಾಂತಿ ನಕ್ಸರ್‌ ಮಾತನಾಡಿ, ‘ಎನ್‌ಇಪಿಯನ್ನು ಆಳವಾಗಿ ಅಧ್ಯಯನ ಮಾಡಿದಾಗ ಇದು ರಾಷ್ಟ್ರ ವಿರೋಧಿ ಶಿಕ್ಷಣ ನೀತಿ ಎಂಬುದು ಗೊತ್ತಾಗುತ್ತದೆ. ಬಹುಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರ’ ಎಂದು ವಿಶ್ಲೇಷಿಸಿದರು.

ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶೇ 94.5ರಷ್ಟು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಾಲ್ಕು ವರ್ಷದ ಪದವಿಯನ್ನು ತಿರಸ್ಕರಿಸಿದ್ದಾರೆ. ಬಹುಪ್ರವೇಶ ಮತ್ತು ಬಹುನಿರ್ಗಮನ ಪದ್ಧತಿಯಿಂದ ಉದ್ಯೋಗ ಪಡೆಯಲು ಯಾವುದೇ ಸಹಾಯವಾಗುವುದಿಲ್ಲ ಎಂದು ಶೇ92.32 ಜನ ಅಭಿಪ್ರಾಯಪಟ್ಟಿದ್ದಾರೆ’ ಎಂದು ವಿವರಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞರಾದ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಅಬ್ದುಲ್‌ ಸುಭಾನ್‌, ಮಹೇಶ್‌ ಎಸ್‌. ರಾಜಶೇಖರ್‌ ವಿ.ಎನ್‌., ರಮೇಶ್‌ ಲಂಡನಕರ್‌, ಎಚ್‌.ಎಂ. ಸೋಮಶೇಖರಪ್ಪ, ಪಾಲ್‌ ನ್ಯೂಮನ್‌, ಸಗಾಯ್‌ ಮೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.