ADVERTISEMENT

ಕೋವಿಡ್-19: ‘ಹಿಂಜರಿಕೆ ಬಿಡಿ, ಪರೀಕ್ಷೆ ಮಾಡಿಸಿಕೊಳ್ಳಿ’

ಪರೀಕ್ಷೆಯ ಉಸ್ತುವಾರಿ ಶಾಲಿನಿ ರಜನೀಶ್ ಮನವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 21:00 IST
Last Updated 20 ಆಗಸ್ಟ್ 2020, 21:00 IST
ಶಾಲಿನಿ ರಜನೀಶ್‌
ಶಾಲಿನಿ ರಜನೀಶ್‌   

ಬೆಂಗಳೂರು: ‘ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಲ್ಲಿ ಹಿಂಜರಿಕೆ ಬಿಟ್ಟು, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಮೂಲಕ ಸೋಂಕು ಹರಡುವಿಕೆ ತಡೆಯಲು ಸಹಕರಿಸಬೇಕು’ ಎಂದು ಕೋವಿಡ್‌ ಪರೀಕ್ಷೆಯ ಉಸ್ತುವಾರಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮನವಿ ಮಾಡಿದ್ದಾರೆ.

ಕೋವಿಡ್‌ ಪರೀಕ್ಷೆಯ ಮಹತ್ವದ ಬಗ್ಗೆ ಮಾತನಾಡಿರುವ ಅವರು, ‘ಹಲವರು ತಪ್ಪು ಕಲ್ಪನೆಯಿಂದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಜತೆಗಿನ ಕುಟುಂಬದ ಸದಸ್ಯರಿಗೂ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರ ಚಿಕಿತ್ಸಾಲಯಗಳ ಜತೆಗೆ ಮೊಬೈಲ್‌ ವ್ಯಾನ್‌ ಮೂಲಕ ಕೂಡ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಕಂಟೈನ್‌ಮೆಂಟ್‌ ಪ್ರದೇಶ, ಕೊಳೆಗೇರಿ ಪ್ರದೇಶ ಸೇರಿದಂತೆ ಹೆಚ್ಚಿನ ಅಪಾಯ ಇರುವ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡುತ್ತಿದ್ದೇವೆ. ಆ್ಯಂಟಿಜೆನ್‌ ಪ‍ರೀಕ್ಷೆಯಲ್ಲಿ ಅರ್ಧಗಂಟೆಯಲ್ಲಿಯೇ ವರದಿ ಬರಲಿದೆ. ಲಕ್ಷಣಗಳು ಇರುವ ವ್ಯಕ್ತಿ ಸೋಂಕಿತನಾಗಿಲ್ಲ ಎಂಬ ವರದಿ ಬಂದಲ್ಲಿ ಎರಡನೇ ಬಾರಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

‘ಕಂಟೈನ್‌ಮೆಂಟ್‌ ವಲಯದಲ್ಲಿ ಅಧಿಕ ಪ್ರಕರಣಗಳು ವರದಿಯಾಗಿದ್ದರೂ ಅಲ್ಲಿ ಎಲ್ಲರೂ ಸೋಂಕಿತರಾಗಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಉತ್ತಮ ಜೀವನಶೈಲಿ ಹಾಗೂ ಆಹಾರ ಕ್ರಮ ಅಳವಡಿಸಿಕೊಂಡಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಾಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರಾಯಿತು ಎಂಬ ಮನೋಭಾವದಿಂದ ಹೊರಬರಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.