ADVERTISEMENT

ಸ್ಕೈ ವಾಕ್‌ ನಿರ್ಮಾಣ ಕೈಬಿಡಿ: ಪ್ರೊ.ಎಂ.ಆರ್‌.ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:16 IST
Last Updated 26 ಮೇ 2022, 20:16 IST
ದೊರೆಸ್ವಾಮಿ
ದೊರೆಸ್ವಾಮಿ   

ಬೆಂಗಳೂರು: ‘ನಗರದಲ್ಲಿ ಮತ್ತೆ 40 ಸ್ಕೈ ವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ. ಈಗಿರುವ ಸ್ಕೈ ವಾಕ್‌ಗಳನ್ನೇ ‌‌‌‌‌‌‌ಜನರು ಅಪ್ಪಿ–ತಪ್ಪಿಯೂ ಬಳಸುತ್ತಿಲ್ಲ. ಹಾಗಾಗಿ ಈ ಪ್ರಸ್ತಾವವನ್ನು ಕೈಬಿಡಬೇಕು’ ಎಂದು ಸರ್ಕಾರದ ಶಿಕ್ಷಣ ಸುಧಾರಣೆ ಮಾಜಿ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಒತ್ತಾಯಿಸಿದ್ದಾರೆ.

‘ಸ್ಕೈವಾಕ್‌ ಬಳಸಲು ಮೇಲಕ್ಕೆ ಹತ್ತಿ ಇಳಿಯಬೇಕು. ಇದಕ್ಕೆ ಜನ ಸಿದ್ಧರಿಲ್ಲ. ಬಿಬಿಎಂಪಿ ಕಚೇರಿ ಸಮೀಪವೇ ನಿರ್ಮಿಸಿರುವ ಸ್ಕೈ ವಾಕ್‌ ಕೂಡ ಬಳಕೆಯಾಗುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಈ ಹಿಂದೆ ಸ್ಕೈ ವಾಕ್‌ಗಳ ಬಳಕೆಯನ್ನು ಸುಗಮಗೊಳಿಸಲು ಎಸ್ಕಲೇಟರ್‌ಗಳನ್ನು ಅಳವಡಿಸಬೇಕು ಎಂಬ ಸಲಹೆ ವ್ಯಕ್ತವಾಗಿತ್ತು. ಇದಕ್ಕೆ ದುಬಾರಿ ವೆಚ್ಚವಾಗುತ್ತದೆ. ಸ್ಕೈವಾಕ್‌ ನಿರ್ಮಾಣಕ್ಕೂ ಭಾರಿ ಪ್ರಮಾಣದ ಉಕ್ಕು ಬೇಕಾಗುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿಯೂ ಅವುಗಳನ್ನು ಜನರು ಬಳಸದಿದ್ದರೆ ತೆರಿಗೆದಾರರ ಹಣ ವ್ಯರ್ಥವಾಗುತ್ತದೆ ಅಷ್ಟೇ’ ಎಂದು ಅವರುಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕು. ಅನುದಾನದ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಿಬಿಎಂಪಿಯು ಹಣವನ್ನು ಎಚ್ಚರಿಕೆಯಿಂದ ವೆಚ್ಚ ಮಾಡುವುದನ್ನು ಬಿಟ್ಟು ಈ ರೀತಿ ದುಂದು ವೆಚ್ಚ ಮಾಡುವುದನ್ನು ಸಮರ್ಥಿಸಲಾಗದು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನೆರವಾಗುವುದಾದರೆ, ಸ್ಕೈ ವಾಕ್‌ಗಳು ನಿರ್ಮಿಸುವುದನ್ನು ಸ್ವಾಗತಿಸಬಹುದು.ಆದರೆ, ಜಾಹೀರಾತು ಪ್ರಕಟಣೆ ಹೊರತಾಗಿ ಬೇರಾವ ಪ್ರಯೋಜನವೂ ಇವುಗಳಿಂದ ಆಗುತ್ತಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.