ADVERTISEMENT

ಡಾ. ರಾಜ್‌ ಕುಟುಂಬದ ಅವಹೇಳನ: ಎರಡು ಗುಂಪಿನ ನಡುವೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:00 IST
Last Updated 24 ಡಿಸೆಂಬರ್ 2022, 22:00 IST
   

ಬೆಂಗಳೂರು: ಡಾ. ರಾಜ್‌ಕುಮಾರ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರದಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಹಾಗೂ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಚಾಮರಾಜಪೇಟೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಚಾಮರಾಜಪೇಟೆ 3ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ರಾತ್ರಿ ಗಲಾಟೆ ಆಗಿದೆ. ಎರಡೂ ಗುಂಪಿನವರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಪುನೀತ್ ಕೆರೆಹಳ್ಳಿ ಹಾಗೂ ಶಿವಕುಮಾರ್ ಪ್ರತ್ಯೇಕ ದೂರು ನೀಡಿದ್ದಾರೆ. ಎರಡು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಚಾಮರಾಜಪೇಟೆ ಪೊಲೀಸರು ತಿಳಿಸಿದರು.

ADVERTISEMENT

ಆಗಿದ್ದೇನು?: ಹೊಸಪೇಟೆಯಲ್ಲಿ ಇತ್ತೀಚೆಗೆ ನಟರೊಬ್ಬರ ಮೇಲೆ ಚಪ್ಪಲಿ ಎಸೆದಿದ್ದ ಘಟನೆ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಕೆರೆಹಳ್ಳಿ, ಡಾ. ರಾಜ್‌ಕುಮಾರ್ ಕುಟುಂಬದವರ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿದ್ದರೆಂದು ಹೇಳಲಾಗಿದೆ. ಇದನ್ನು ಖಂಡಿಸಿದ್ದ ಹಲವರು, ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಶಿವಕುಮಾರ್ ಸಹ ಕರೆ ಮಾಡಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.ಪುನೀತ್, ‘ನಾನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿಲ್ಲ. ಕ್ಷಮೆ ಕೇಳುವುದಿಲ್ಲ. ಬೇಕಾದರೆ ಚಾಮರಾಜಪೇಟೆಗೆ ಬರುತ್ತೇನೆ. ನೀನು ಬಾ’ ಎಂದಿದ್ದರು. ಶಿವಕುಮಾರ್, ತಮ್ಮ ಗುಂಪಿನ ಜೊತೆ ಚಾಮರಾಜಪೇಟೆಗೆ ಬಂದಿದ್ದರು. ಪುನೀತ್‌ ಸಹ ಸ್ಥಳದಲ್ಲಿದ್ದರು. ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ನಡುವೆ ಗಲಾಟೆ ನಡೆದಿದೆ.

‘ವಿನಾಕಾರಣ ಆರೋಪ ಮಾಡಿ ನನ್ನ ಕೊಲೆಗೆ ಯತ್ನಿಸಲಾಗಿದೆ’ ಎಂದು ಪುನೀತ್ ದೂರಿದ್ದಾರೆ.

ಶಿವಕುಮಾರ್, ‘ಡಾ. ರಾಜ್‌ಕುಮಾರ್ ಕುಟುಂಬದ ಬಗ್ಗೆ ಅವಹೇಳನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.