ಬೆಂಗಳೂರು: ‘ಬೆಂಗಳೂರಿನ ಎರಡು ಕೋಟಿ ಜನರಿಗೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದ್ದು, ಇದಕ್ಕಾಗಿ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ಜಲಮಂಡಳಿ ಜಲ ಸಂರಕ್ಷಣೆಯಲ್ಲಿ ಪಡೆದ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಪ್ರಮಾಣಪತ್ರವನ್ನು ಬುಧವಾರ ಸ್ವೀಕರಿಸಿ ಅವರು ಮಾತನಾಡಿದರು.
‘ನಗರದ ಒಳಗೆ 1.40 ಕೋಟಿ ಜನಸಂಖ್ಯೆ ಇದ್ದು, ಆನೇಕಲ್ ಹಾಗೂ ಇತರೆ ಭಾಗದಲ್ಲಿ 50 ಲಕ್ಷ ಜನಸಂಖ್ಯೆ ಇದೆ. ಬೆಂಗಳೂರಿಗೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಹೀಗಾಗಿ ಹೊಸ ಯೋಜನೆಗಳು ಅಗತ್ಯ’ ಎಂದರು.
‘ಬೆಂಗಳೂರು ಯೋಜಿತ ನಗರವಲ್ಲ. ಬಹಳ ದೊಡ್ಡದಾಗಿ ಬೆಳೆದಿದೆ. ಹೀಗಾಗಿ ಇಲ್ಲಿ ಗ್ರೇಟರ್ ಬೆಂಗಳೂರನ್ನು ಘೋಷಣೆ ಮಾಡಿ, ಮತ್ತಷ್ಟು ಪ್ರದೇಶವನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ದೆಹಲಿ ಸೇರಿದಂತೆ ಬೇರೆ ನಗರಗಳಲ್ಲಿ ಕುಡಿಯುವ ನೀರಿನ ಸಂಪರ್ಕವೇ ಬೇರೆ, ದಿನಬಳಕೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವೇ ಬೇರೆ ಇದೆ. ಆದರೆ ನಮ್ಮಲ್ಲಿ ಕುಡಿಯಲು, ವಾಹನ ತೊಳೆಯಲು, ಗಿಡಗಳಿಗೆ ಹಾಕಲು ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. ಶೇಕಡ 35ರಷ್ಟು ಜನ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ’ ಎಂದು ತಿಳಿಸಿದರು.
‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಂತೆ ಬಸ್, ರೈಲು ಪ್ರಯಾಣ ದರ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಹತ್ತು ವರ್ಷಗಳಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ. ಇದರಿಂದ ಬೆಂಗಳೂರು ಜಲಮಂಡಳಿ ವಾರ್ಷಿಕವಾಗಿ ₹400 ಕೋಟಿಯಿಂದ ₹500 ಕೋಟಿ ನಷ್ಟ ಅನುಭವಿಸುತ್ತಿತ್ತು. ಒಂದು ದಾಖಲೆ ಪ್ರಕಾರ, ₹1,000 ಕೋಟಿ ನಷ್ಟವಾಗುತ್ತಿದೆ. ದರ ಪರಿಷ್ಕರಣೆಯಿಂದ ₹500 ಕೋಟಿ ನಷ್ಟ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ’ ಎಂದು ಹೇಳಿದರು.
ಜಲಮಂಡಳಿಗೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ:
ಬೆಂಗಳೂರು ಜಲಮಂಡಳಿ ನಡೆಸಿದ ಜಲ ಸಂರಕ್ಷಣೆ ಅಭಿಯಾನ ಸಪ್ತಾಹದಲ್ಲಿ 533642 ಜನರು ಪ್ರತಿಜ್ಞೆ ಸ್ವೀಕರಿಸಿದ್ದರು. ಜಲ ಸಂರಕ್ಷಣೆಯ ಈ ಪ್ರತಿಜ್ಞೆಗೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ನ ಭಾರತೀಯ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಪ್ರಮಾಣ ಪತ್ರವನ್ನು ಬುಧವಾರ ಪ್ರದಾನ ಮಾಡಿದರು. ‘ಮಾರ್ಚ್ 21ರಿಂದ 28ರವರೆಗೆ ನಡೆದ ಜಲ ಸಂರಕ್ಷಣೆ ಅಭಿಯಾನ ಸಪ್ತಾಹದಲ್ಲಿ ಒಂದು ಲಕ್ಷ ಜನರು ಪ್ರತಿಜ್ಞೆ ಸ್ವೀಕರಿಸುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಅದು 5 ಲಕ್ಷ ಮೀರಿ ಗಿನ್ನಿಸ್ ದಾಖಲೆ ಬರೆದಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
‘ಕಾವೇರಿ ಆರತಿ: 1500 ಉದ್ಯೋಗ ಸೃಷ್ಟಿ’:
‘ಶ್ರೀರಂಗಪಟ್ಟಣದಲ್ಲಿ ನಡೆಯುವ ಕಾವೇರಿ ಆರತಿ ಬಗೆಗಿನ ಅನುಮಾನಗಳನ್ನು ಪರಿಹರಿಸಲು ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತದೆ. ಕಾವೇರಿ ಆರತಿ ಜೊತೆಗೆ ನಮ್ಮ ಸಂಸ್ಕೃತಿಯ ಪ್ರದರ್ಶನವೂ ಆಗಲಿದೆ. ಸುಮಾರು 1500 ಸ್ಥಳೀಯರಿಗೆ ಉದ್ಯೋಗ ಲಭ್ಯವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ನೀರಿಗೆ ಜಾತಿ ಭಾಷೆ ಧರ್ಮ ಇಲ್ಲ. ಕುಡಿಯಲು ವ್ಯವಸಾಯಕ್ಕೆ ಕೈಗಾರಿಕೆ ಎಲ್ಲದಕ್ಕೂ ನೀರು ಅಗತ್ಯ. ನೀರಿಗಾಗಿ ಉತ್ತಮ ಮಳೆಗಾಗಿ ಪ್ರಾರ್ಥನೆ ಮಾಡುವುದಕ್ಕೆ ತೊಂದರೆ ಏನು? ಕಾವೇರಿ ತುಂಬಿ ಹರಿಯದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.