ADVERTISEMENT

ಬೆಂಗಳೂರು | ಕುಡಿಯುವ ನೀರು ಪೋಲು: 112 ಪ್ರಕರಣ ದಾಖಲು, ₹5.60 ಲಕ್ಷ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 16:06 IST
Last Updated 23 ಫೆಬ್ರುವರಿ 2025, 16:06 IST
ಕೊಡಿಗೆಹಳ್ಳಿ ತಿಂಡ್ಲು ಮುಖ್ಯರಸ್ತೆಯ ಮನೆಯ ಎದುರಿನ ಅಂಗಳವನ್ನು ಕುಡಿಯುವ ನೀರಿನಿಂದ ತೊಳೆಯುತ್ತಿರುವ ದೃಶ್ಯವನ್ನು ಜಲಮಂಡಳಿ ಸೆರೆಹಿಡಿದಿರುವುದು 
ಕೊಡಿಗೆಹಳ್ಳಿ ತಿಂಡ್ಲು ಮುಖ್ಯರಸ್ತೆಯ ಮನೆಯ ಎದುರಿನ ಅಂಗಳವನ್ನು ಕುಡಿಯುವ ನೀರಿನಿಂದ ತೊಳೆಯುತ್ತಿರುವ ದೃಶ್ಯವನ್ನು ಜಲಮಂಡಳಿ ಸೆರೆಹಿಡಿದಿರುವುದು    

ಬೆಂಗಳೂರು: ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ ‘ದಂಡ’ದ ಅಭಿಯಾನ ನಡೆಸುತ್ತಿರುವ ಜಲಮಂಡಳಿ, ಒಂದು ವಾರದಲ್ಲಿ 112 ಪ್ರಕರಣಗಳನ್ನು ದಾಖಲಿಸಿದೆ. ₹5.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಜಲಮಂಡಳಿ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ನೀರು ಪೋಲು ಮಾಡುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ - 1964 ರ ಕಲಂ 33 ಮತ್ತು 34 ರ ದಂಡ ವಿಧಿಸುವ ಕುರಿತು ಎಚ್ಚರಿಸಿತ್ತು. ಮಂಡಳಿಯ ಎಚ್ಚರಿಕೆಯನ್ನು ಕಡೆಗಣಿಸಿ, ಕುಡಿಯುವ ನೀರು ಪೋಲು ಮಾಡುತ್ತಿದ್ದವರನ್ನು ಅಧಿಕಾರಿಗಳು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ವಲಯದಲ್ಲಿ ಹೆಚ್ಚು:

ADVERTISEMENT

ಇಲ್ಲಿವರೆಗೆ‌(ಫೆಬ್ರುವರಿ 23) 112 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ದಕ್ಷಿಣ ವಲಯದಲ್ಲಿ ಹೆಚ್ಚು ಪ್ರಕರಣಗಳು (33) ದಾಖಲಾಗಿವೆ. ಉತ್ತರ ವಲಯದಲ್ಲಿ 23, ಪಶ್ಚಿಮ ವಲಯದಲ್ಲಿ 28, ಪೂರ್ವ ವಲಯದಲ್ಲಿ 28 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಗರದ ಕೆಲವು ವಾರ್ಡ್‌ಗಳಲ್ಲಿ ಅಂತರ್ಜಲದ ಮಟ್ಟ ಕುಸಿಯಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಕಾರಣದಿಂದ ಇಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ‘ದಂಡ ಅಭಿಯಾನ’ವನ್ನು ಇನ್ನಷ್ಟು ವ್ಯಾಪಕಗೊಳಿಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.