ADVERTISEMENT

ನಗರದಲ್ಲಿ ಮೊದಲ ಬಾರಿಗೆ ‘ಡ್ರೋನ್‌’ಗಳ ಬೃಹತ್ ರೇಸ್‌ !

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2018

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:54 IST
Last Updated 20 ನವೆಂಬರ್ 2018, 19:54 IST
ಕೆ.ಜೆ.ಜಾರ್ಜ್‌
ಕೆ.ಜೆ.ಜಾರ್ಜ್‌   

ಬೆಂಗಳೂರು: ಸೈಕಲ್‌, ಬೈಕ್‌, ಕಾರ್‌ ಮತ್ತು ಇತರ ಬಗೆಯ ರೇಸ್‌ಗಳನ್ನು ವೀಕ್ಷಿಸಿ ರೋಮಾಂಚನ ಪಡೆದಿರಬಹುದು. ಆದರೆ, ಆಧುನಿಕ ಯುಗದ ಮಾನವ ರಹಿತ ವೈಮಾನಿಕ ಸಾಧನ ‘ಡ್ರೋನ್‌’ಗಳ ರೇಸ್‌ ಬಗ್ಗೆ ಕೇಳಿದ್ದೀರಾ? ಇದೇ 29 ರಂದು ನಗರದಲ್ಲಿ ಡ್ರೋನ್‌ಗಳ ಭಾರಿ ರೇಸ್‌ ನಡೆಯಲಿದೆ.

ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ, ತೆರೆದ ಪ್ರದೇಶದಲ್ಲಿ ಡ್ರೋನ್‌ ರೇಸ್‌ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ಅಂದು ರಾತ್ರಿ ಡ್ರೋನ್‌ಗಳ ರೇಸ್‌ ಸ್ಪರ್ಧೆಯಲ್ಲಿ ದೇಶ– ವಿದೇಶಗಳ ಸುಮಾರು 30 ತಂಡಗಳು ಭಾಗವಹಿಸುತ್ತಿವೆ.

ಡಿಸೆಂಬರ್‌ 1 ರಿಂದ ದೇಶದಾದ್ಯಂತ ವಾಣಿಜ್ಯ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಲು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಮತಿ ನೀಡಿದ್ದು, ಅದಕ್ಕೆ ಪೂರ್ವಭಾವಿಯಾಗಿ ಸಂಭ್ರಮಾಚರಣೆಗಾಗಿ ಡ್ರೋನ್‌ ಸ್ಪರ್ಧೆ ಆಯೋಜಿಸಲಾಗಿದೆ.

ADVERTISEMENT

ಇದೇ 29 ರಿಂದ ಡಿಸೆಂಬರ್‌ 1 ರವರೆಗೆ ನಡೆಯುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಭಾಗವಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಟಿ–ಬಿಟಿ ಮತ್ತು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

250 ಗ್ರಾಂ ತೂಕದ ಡ್ರೋನ್‌ಗಳು: ‘ಈ ಸ್ಪರ್ಧೆಯಲ್ಲಿ 250 ಗ್ರಾಂ ತೂಕದ ಡ್ರೋನ್‌ಗಳು ಪಾಲ್ಗೊಳ್ಳುತ್ತವೆ. ಇವು ಗಂಟೆಗೆ 80 ರಿಂದ 120 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತವೆ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಡ್ರೋನ್‌ಗಳ ಕ್ಷಮತೆಯನ್ನು ಅರಿತುಕೊಳ್ಳಲು ಇದರಿಂದ ಸಾಧ್ಯ. ದೇಶದ ವಿವಿಧ ಕಡೆಗಳಲ್ಲಿ ಹಾಲ್‌ಗಳಲ್ಲಿ ಸಣ್ಣ ಮಟ್ಟದ ರೇಸ್‌ಗಳು ನಡೆದಿರಬಹುದು. ಆದರೆ, ತೆರೆದ ಪ್ರದೇಶದಲ್ಲಿ ನಡೆಸುತ್ತಿರುವುದು ಇದೇ ಮೊದಲು’ ಎಂದು ಅವರು ಹೇಳಿದರು.

ಹ್ಯುಮೇನ್‌ ಕೋಡ್‌ ಹ್ಯಾಕಥಾನ್‌:ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಅಂಗವಾಗಿ, ವಿಶ್ವ ಮಟ್ಟದ ‘ಹ್ಯುಮೇನ್‌ ಕೋಡ್‌’ ಎಂಬ ಹ್ಯಾಕಥಾನ್‌ ಏರ್ಪಡಿಸಲಾಗಿತ್ತು. ಇದರಲ್ಲಿ 68 ದೇಶಗಳ 4157 ತಂಡಗಳು ಪಾಲ್ಗೊಂಡಿದ್ದವು ಎಂದು ಜಾರ್ಜ್‌ ಹೇಳಿದರು.

ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹ್ಯಾಕಥಾನ್‌ ಏರ್ಪಡಿಸಲಾಗಿದೆ. ಉತ್ತಮ ಪರಿಹಾರ ಸೂಚಿಸುವ ಕೋಡರ್‌ ಕಮ್ಯುನಿಟಿಗಳಿಗೆ ಸುಮಾರು ₹ 15 ಲಕ್ಷ ಬಹುಮಾನ ನೀಡಲಾಗುವುದು. ಈ ತಂಡಗಳು ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗವಹಿಸಲಿವೆ ಎಂದರು.

ಎಲೆಕ್ಟ್ರಾನಿಕ್ಸ್‌ ಕ್ರಾಂತಿಗೆ ಸಜ್ಜು

ಐಟಿ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಎನಿಸಿರುವ ಬ್ಲಾಕ್‌ ಚೈನ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ರೊಬಾಟಿಕ್ಸ್‌, ಇಂಟೆಲಿಜೆಂಟ್‌ ಆ್ಯಪ್‌ ಅಂಡ್‌ ಅನಾಲಿಟಿಕ್ಸ್‌, ಸೈಬರ್‌ ಸೆಕ್ಯುರಿಟಿ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ನಿಂತು ‘ಎಲೆಕ್ಟ್ರಾನಿಕ್ಸ್‌ ಕ್ರಾಂತಿ’ ಮಾಡುವ ಅವಕಾಶ ತಪ್ಪಿಸಿಕೊಳ್ಳಬಾರದು. ಕೈಗಾರಿಕ ಕ್ರಾಂತಿ ಆದಾಗ ಭಾರತ ಮಹತ್ವದ ಪಾತ್ರವಹಿಸಿರಲಿಲ್ಲ ಎಂದು ಸಚಿವ ಜಾರ್ಜ್‌ ತಿಳಿಸಿದರು.

ಶೃಂಗಸಭೆಯ ವಿಶೇಷತೆಗಳು

* ಭಾಷಣಕಾರರು 267

* ಪ್ರತಿನಿಧಿಗಳು 3173

* ವಸ್ತು ಪ್ರದರ್ಶನ ಮಳಿಗೆ 246

* ಸ್ಟಾರ್ಟ್‌ಅಪ್‌ 100 ಕ್ಕೂ ಹೆಚ್ಚು

* ಉದ್ಯಮ, ಸಂಸ್ಥೆಗಳು 1500

* ಇದೇ 29 ರಿಂದ ಡಿಸೆಂಬರ್‌ 1 ರವರೆಗೆ ನಡೆಯುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಭಾಗವಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ

-ಕೆ.ಜೆ.ಜಾರ್ಜ್‌, ಐಟಿ–ಬಿಟಿ ಮತ್ತು ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.