ಬೆಂಗಳೂರು: ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಕಾರ್ಯಪಡೆಯ (ಎಎನ್‌ಟಿಎಫ್) ಪೊಲೀಸರು, ಬೆಂಗಳೂರಿನ ಮೂರು ಸ್ಥಳಗಳಲ್ಲಿ ₹55.88 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದ ಪ್ರಕರಣದ ತನಿಖೆ ಚುರುಕುಕೊಂಡಿದೆ. ತಲೆಮರೆಸಿಕೊಂಡಿರುವ ಇಬ್ಬರಿಗೆ ವಿವಿಧ ರಾಜ್ಯಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಮಹಾರಾಷ್ಟ್ರದ ಪ್ರಶಾಂತ್ ಯಲ್ಲಪ್ಪ ಪಾಟೀಲ ಕೆಮಿಕಲ್ ಎಂಜಿನಿಯರ್ ಆಗಿದ್ದು, ಡ್ರಗ್ಸ್ ಜಾಲದ ಸೂತ್ರಧಾರ ಎಂಬ ಶಂಕೆ ವ್ಯಕ್ತವಾಗಿದೆ.
‘ಮುಂಬೈನಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದ ಎಎನ್‌ಟಿಎಫ್ ಸಿಬ್ಬಂದಿ ₹1.5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಂಡು, ಅಬ್ದುಲ್ ಖಾದರ್ ಶೇಖ್ ಅವರನ್ನು ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿ ಮೇಲೆ ಮಹಾರಾಷ್ಟ್ರದ ಪ್ರಶಾಂತ್ ಯಲ್ಲಪ್ಪ ಪಾಟೀಲ ಎಂಬಾತನ ಬಂಧನ ಆಗಿತ್ತು. ಅದಾದ ಮೇಲೆ ರಾಜಸ್ಥಾನದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಎಂಬುವರನ್ನು ಬಂಧಿಸಲಾಗಿತ್ತು. ನಾಲ್ವರು ನೀಡಿದ ಸುಳಿವು ಆಧರಿಸಿ, ಡಿ.24 ಹಾಗೂ 25ರಂದು ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು’ ಎಂದು ಮೂಲಗಳು ಹೇಳಿವೆ.
ರಾಜಸ್ಥಾನದ ಉದ್ಯಮಿಗಳಾದ ಯೋಗಿರಾಜ್ ಕುಮಾರ್, ನಯನ್ ಪವಾರ್ ಅವರು ನಾಲ್ವರ ಮೂಲಕ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಕಾರ್ಖಾನೆ ನಡೆಸುತ್ತಿದ್ದರು. ಇಬ್ಬರೂ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಕಾರ್ಖಾನೆ ನಡೆಸುತ್ತಿರುವುದು ಪತ್ತೆಯಾಗಿದೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಕಾರ್ಖಾನೆಗಳನ್ನು ಪತ್ತೆ ಹಚ್ಚಲಾಗಿದೆ.
ದಾಳಿಯ ವೇಳೆ 4.1 ಕೆ.ಜಿ ಘನರೂಪದ ಎಂಡಿಎಂಎ ಮತ್ತು 17 ಕೆ.ಜಿ ದ್ರವರೂಪದ ಎಂಡಿಎಂಎ ಸೇರಿದಂತೆ ಒಟ್ಟು 21.4 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್ ತಯಾರಿಸುವ ಯಂತ್ರೋಪಕರಣ ಮತ್ತು ರಾಸಾಯನಿಕ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮೂರು ಕಾರ್ಖಾನೆಗಳಿಂದ ದೇಶದ ಬೇರೆ ಬೇರೆ ರಾಜ್ಯಗಳಿಗೆ ಸಿಂಥೆಟಿಕ್ ಮಾದರಿಯ ಡ್ರಗ್ಸ್ ಪೂರೈಕೆ ಆಗುತ್ತಿರುವ ಶಂಕೆಯಿದೆ ಎಂದು ಮೂಲಗಳು ಹೇಳಿವೆ.
ಡ್ರಗ್ಸ್ ತಯಾರಿಕೆಗೆ ಬೇಕಾದ ರಾಸಾಯನಿಕಗಳ ಸಾಗಣೆ, ತಯಾರಿಕೆ ವಿಧಾನವನ್ನು ಪ್ರಶಾಂತ್ ಹೇಳಿಕೊಡುತ್ತಿದ್ದ ಎಂಬುದು ತನಿಖೆ ವೇಳೆ ಕಂಡುಬಂದಿದೆ.
ಕಾರ್ಖಾನೆಗಳಿಗೆ ಬೇಕಾದ ಯಂತ್ರೋಪಕರಣ ಹಾಗೂ ಕಟ್ಟಡ ವ್ಯವಸ್ಥೆಯನ್ನು ಯೋಗಿರಾಜ್ ಕುಮಾರ್ ಮತ್ತು ನಯನ್ ಮಾಡಿಕೊಟ್ಟಿದ್ದರು ಎಂದು ಮೂಲಗಳು ಹೇಳಿವೆ.
‘ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಡ್ರಗ್ಸ್ ತಯಾರಿಸುವ ಮೂರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಬಾಗಲೂರು, ಅವಲಹಳ್ಳಿ ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ 8 ಕಿ.ಮೀ ಅಂತರದಲ್ಲಿ ಈ ಕಾರ್ಖಾನೆ, ಗೋದಾಮುಗಳನ್ನು ಸ್ಥಾಪಿಸಲಾಗಿತ್ತು. ಠಾಣಾ ವ್ಯಾಪ್ತಿಗಳ ಗಡಿ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.
ಸ್ಥಳಕ್ಕೆ ಕಮಿಷನರ್ ಭೇಟಿ
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲಿಸಿದರು. ‘ಮಹಾರಾಷ್ಟ್ರದ ಎಎನ್‌ಟಿಎಫ್ ಹೇಳಿದಂತೆ ಅಲ್ಲಿ ಮಾದಕ ವಸ್ತು ತಯಾರಿಕೆ ಘಟಕ ಅಥವಾ ಕಾರ್ಖಾನೆ ಇರಲಿಲ್ಲ. ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದು 17 ಲೀಟರ್ ರಾಸಾಯನಿಕ ಸಂಗ್ರಹಿಸಿ ಇಡಲಾಗಿತ್ತು’ ಎಂದು ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.