ADVERTISEMENT

ಡ್ರಗ್ಸ್ ಮಾರಾಟ: ಮಾರಕಾಸ್ತ್ರ ತೋರಿಸಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:42 IST
Last Updated 2 ಜುಲೈ 2022, 19:42 IST
   

ಬೆಂಗಳೂರು: ಡ್ರಗ್ಸ್ ಮಾರಾಟ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

‘ಕಾಡುಗೊಂಡನಹಳ್ಳಿಯ (ಕೆ.ಜಿ.ಹಳ್ಳಿ) ಅನ್ವರ್ ಬಡಾವಣೆಯ ರೂಹಿತ್ ಹುಸೇನ್ (23), ಮಹಮ್ಮದ್ ರಿಜ್ವಾನ್ ಅಲಿಯಾಸ್ ಜೋಕನ್ (20) ಹಾಗೂ ದೇವರ ಜೀವನಹಳ್ಳಿಯ (ಡಿ.ಜೆ.ಹಳ್ಳಿ) ಮೊಹಮ್ಮದ್ ಸಾದಿಕ್ (20) ಬಂಧಿತರು. ಇವರಿಂದ ₹ 22 ಲಕ್ಷ ಮೌಲ್ಯದ 425 ಗ್ರಾಂ ಚಿನ್ನಾಭರಣ ಹಾಗೂ ₹ 3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಜೂನ್ 29ರಂದು ವಾಹನ ತಪಾಸಣೆ ಮಾಡುತ್ತಿದ್ದರು. ಅನುಮಾನಾಸ್ಪದವಾಗಿ ಹೊರಟಿದ್ದ ಆರೋಪಿಗಳ ವಾಹನ ತಡೆದು ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಗಿತ್ತು. ಠಾಣೆಗೆ ಕರೆದೊಯ್ದು ವಿಚಾರಿಸಿದಾಗ, ಸುಲಿಗೆ ಪ್ರಕರಣಗಳೂ ಬಯಲಾದವು’ ಎಂದೂ ತಿಳಿಸಿದರು.

ADVERTISEMENT

‘ಆರೋಪಿಗಳು ವ್ಯವಸ್ಥಿತ ಜಾಲ ರೂಪಿಸಿಕೊಂಡು, ಡ್ರಗ್ಸ್ ಮಾರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಡ್ರಗ್ಸ್ ಖರೀದಿಸುತ್ತಿದ್ದರು’ ಎಂದು ಹೇಳಿದರು.

ವಾಯುವಿಹಾರಕ್ಕೆ ಹೋಗುವವರ ಸುಲಿಗೆ: ‘ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗುವ ಸಾರ್ವಜನಿಕರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ಚಿನ್ನಾಭರಣ ಹಾಗೂ ಮೊಬೈಲ್ ಸುಲಿಗೆ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ರಾಮಮೂರ್ತಿನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಯಲಹಂಕ, ಸದಾಶಿವನಗರ, ಹೆಣ್ಣೂರು ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.