ADVERTISEMENT

ವೆಬ್‌ಸೈಟ್‌ನಲ್ಲೇ ಅಪ್ಪ–ಮಗನ ಡ್ರಗ್ಸ್‌ ವ್ಯವಹಾರ!

ಸಿಸಿಬಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:25 IST
Last Updated 2 ಸೆಪ್ಟೆಂಬರ್ 2018, 19:25 IST
ಆದರ್ಶ್
ಆದರ್ಶ್   

ಬೆಂಗಳೂರು: ಡಾರ್ಕ್‌ ವೆಬ್‌ಸೈಟ್‌ಗಳ ಮೂಲಕ ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು ನಗರದ ಯುವಕ–ಯುವತಿಯರಿಗೆ ಮಾರುತ್ತಿದ್ದ ಸುರೇಶ್ (47) ಎಂಬಾತನನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಆತನ ಪುತ್ರ ಮೋಹಿತ್‌ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುರೇಶ್ ಕಾರು ಚಾಲಕ. ಮೋಹಿತ್ ಎಂಜಿನಿಯರಿಂಗ್ ಪದವೀಧರ. ಇವರು ಕಾಮಾಕ್ಷಿಪಾಳ್ಯದ ಮಾರುತಿನಗರ 5ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಶನಿವಾರ ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿದಾಗ ₹ 15 ಲಕ್ಷ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾದವು ಎಂದು ಸಿಸಿಬಿ ಪೊಲೀಸರು ಹೇಳಿದರು.

ಮನೆಯಲ್ಲೇ ಕುಳಿತು ಲ್ಯಾಪ್‌ಟಾಪ್‌ ಮೂಲಕ ಡಾರ್ಕ್‌ ವೆಬ್‌ಸೈಟ್ ಪ್ರವೇಶಿಸುತ್ತಿದ್ದ ಮೋಹಿತ್, ವಿದೇಶಿ ಬ್ರ್ಯಾಂಡ್‌ನ ಡ್ರಗ್ಸ್‌ಗಳನ್ನು ಬುಕ್ ಮಾಡುತ್ತಿದ್ದ. ಅದಕ್ಕೆ ಆನ್‌ಲೈನ್ ಮೂಲಕ ಹಣ ಪಾವತಿಸುತ್ತಿದ್ದ. ವಿದೇಶಿ ಪೆಡ್ಲರ್‌ಗಳು ಡ್ರಗ್ಸನ್ನು ಇತರೆ ವಸ್ತುಗಳ ಮಧ್ಯದಲ್ಲಿಟ್ಟು, ವಿಮಾನದಲ್ಲಿ ಪಾರ್ಸಲ್ ಕಳುಹಿಸುತ್ತಿದ್ದರು. ಪೆಡ್ಲರ್‌ಗಳು ಡ್ರಗ್ಸ್‌ನ ಮೇಲೆ ನಿರ್ದಿಷ್ಟ ರಾಸಾಯನಿಕ ದ್ರವ್ಯ ಸಿಂಪಡಿಸುತ್ತಿದ್ದ ಕಾರಣ, ಲೋಹಶೋಧಕದಿಂದ ತಪಾಸಣೆ ನಡೆಸಿದರೂ ಗೊತ್ತಾಗುತ್ತಿರಲಿಲ್ಲ. ಹೀಗೆ ಆ ಪಾರ್ಸಲ್ ಸುಲಭವಾಗಿ ಮೋಹಿತ್‌ನ ಮನೆ ತಲುಪುತ್ತಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೋಹಿತ್, ಡ್ರಗ್ಸ್ ಮಾರಲೆಂದೇ ಪ್ರತ್ಯೇಕ ವೆಬ್‌ಸೈಟ್ ತೆರೆದಿದ್ದ. ಅದರಲ್ಲಿ ಇ–ಮೇಲ್ ವಿಳಾಸವೊಂದನ್ನು ನೀಡಿದ್ದ. ಡ್ರಗ್ಸ್ ಬೇಕಾದವರು, ಅದಕ್ಕೆ ಮೇಲ್ ಕಳುಹಿಸುತ್ತಿದ್ದರು. ನಂತರ ಅವರಿರುವಲ್ಲಿಗೇ ತೆರಳಿ ಡ್ರಗ್ಸ್ ಕೊಟ್ಟು ಬರುತ್ತಿದ್ದ. ಇದಕ್ಕೆ ಹೆಚ್ಚುವರಿ ಸರ್ವಿಸ್ ಶುಲ್ಕವನ್ನೂ ಪಡೆದುಕೊಳ್ಳುತ್ತಿದ್ದ.’

‘ಮಗನ ಈ ವ್ಯವಹಾರದ ಬಗ್ಗೆ ಇತ್ತೀಚೆಗೆ ತಿಳಿದುಕೊಂಡ ಸುರೇಶ್, ಸುಲಭ ಸಂಪಾದನೆಗಾಗಿ ಕೃತ್ಯಕ್ಕೆ ಕೈಜೋಡಿಸಿದ್ದ. ತಂದೆ–ಮಗ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಬಾತ್ಮೀದಾರರೊಬ್ಬರು ಮಾಹಿತಿ ಕೊಟ್ಟರು. ದಾಳಿ ನಡೆಸಿದಾಗ ಮೋಹಿತ್ ಇರಲಿಲ್ಲ. ಸುರೇಶ್‌ನನ್ನು ವಶಕ್ಕೆ ಪಡೆದಾಗ ಕೋಣೆಯಲ್ಲಿ ಅಡಗಿಸಿಟ್ಟಿದ್ದ ಡ್ರಗ್ಸ್ ಹಾಗೂ ಅದನ್ನು ಅಳೆಯುವ ಮಾಪನ ತೋರಿಸಿದ’ ಎಂದು ಮಾಹಿತಿ ನೀಡಿದರು.

ಸುರೇಶ್–ಮೋಹಿತ್‌ ಮನೆಯಲ್ಲಿ ಸಿಕ್ಕ ಡ್ರಗ್ಸ್

ಮಾದಕ ವಸ್ತು; ಪ್ರಮಾಣ

ಹೈಡ್ರೋ ಹೆಸರಿನ ಗಾಂಜಾ;180 ಗ್ರಾಂ

ಎಲ್‌ಎಸ್‌ಡಿ ಪೇಪರ್‌ಗಳು;169

ಎಂಡಿಎಂಎ ಮಾತ್ರೆಗಳು;168

ಹ್ಯಾಶಿಷ್;210 ಗ್ರಾಂ

ಬೆಳಿಗ್ಗೆ ಇದ್ದ ವೆಬ್‌ಸೈಟ್ ರಾತ್ರಿ ಇರಲ್ಲ!

‘ರಾಜಧಾನಿಯಲ್ಲಿ ಈಗ ಅಂತರ್ಜಾಲವೇ ಮಾದಕ ಜಗತ್ತಿನ ಅತಿದೊಡ್ಡ ಮಾರುಕಟ್ಟೆ. ಇಲ್ಲಿ ರೂಪಾಯಿ, ಪೌಂಡ್, ಡಾಲರ್‌ಗಳ ವಹಿವಾಟು ನಡೆಯುತ್ತಿಲ್ಲ. ಬದಲಾಗಿ ‘ಬಿಟ್ ಕಾಯಿನ್’ ಚಲಾವಣೆಯಲ್ಲಿದೆ. ಇಂಥ ವಹಿವಾಟಿಗಾಗಿಯೇ ತಲೆ ಎತ್ತುವ ‘ಡಾರ್ಕ್‌ ವೆಬ್‌ಸೈಟ್‌’ಗಳು ಬೆಳಿಗ್ಗೆ ಹುಟ್ಟಿಕೊಂಡು ರಾತ್ರಿ ವೇಳೆಗೆ ಅಸುನೀಗುತ್ತಿವೆ. ಪೆಡ್ಲರ್‌ಗಳು ಹಾಗೂ ವ್ಯಸನಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮದೇ ಗ್ರೂಪ್‌ಗಳನ್ನು ರಚಿಸಿಕೊಂಡು ಕಳ್ಳ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ, ಅವರನ್ನು ಪತ್ತೆ ಹಚ್ಚುವುದು ಕಷ್ಟ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದರು.

ಡ್ರಗ್ ಪೆಡ್ಲರ್ ಆದ ರ‍್ಯಾಂಕ್ ವಿದ್ಯಾರ್ಥಿ!

ಪಿಯುಸಿಯಲ್ಲಿ ಶೇ 90ರಷ್ಟು ಅಂಕ ಪಡೆದಿದ್ದ ಈ ಪ್ರತಿಭಾವಂತ, ನಂತರ ಉತ್ತರಹಳ್ಳಿ ಮುಖ್ಯರಸ್ತೆಯ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಎಂಜಿನಿಯರಿಂಗ್ ಪದವಿ ಪ್ರಾರಂಭಿಸಿದ. ಅಲ್ಲೂ ಮೊದಲೆರಡು ಸೆಮಿಸ್ಟರ್‌ಗಳಲ್ಲಿ ರ‍್ಯಾಂಕ್ ವಿದ್ಯಾರ್ಥಿಯಾಗಿಯೇ ಮುಂದುವರಿದ. ಆ ನಂತರ ಮಾದಕ ಲೋಕಕ್ಕೆ ಧುಮುಕಿದ ಆತನೀಗ ಡ್ರಗ್ ಪೆಡ್ಲರ್ ಆಗಿದ್ದಾನೆ!

ಬಸವೇಶ್ವರನಗರ 1ನೇ ಅಡ್ಡರಸ್ತೆ ನಿವಾಸಿ ಕೆ.ಎನ್.ಆದರ್ಶ್‌ನ ಕತೆ ಇದು. ಸಿಸಿಬಿ ಮಹಿಳೆ ಮತ್ತು ಮಾದಕದ್ರವ್ಯ ನಿಗ್ರಹ ದಳದ ಎಸಿಪಿ ಬಿ.ಎಸ್.ಮೋಹನ್‌ ಕುಮಾರ್ ನೇತೃತ್ವದ ತಂಡ ಶನಿವಾರ ಆತನ ಮನೆ ಮೇಲೆ ದಾಳಿ ನಡೆಸಿದಾಗ, ₹ 60 ಸಾವಿರ ಮೌಲ್ಯದ 11 ಎಲ್‌ಎಸ್‌ಡಿ ಪೇಪರ್‌ಗಳು ಹಾಗೂ 11 ಎಂಡಿಎಂಎ ಮಾತ್ರೆಗಳು ಸಿಕ್ಕಿವೆ. ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

‘ಕಾಲೇಜು ದಿನಗಳಲ್ಲಿ ಕೆಲ ಸ್ನೇಹಿತರು ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಲಿಸಿದರು. ಆರಂಭದ ಆಕರ್ಷಣೆ ಕ್ರಮೇಣ ನನ್ನನ್ನು ವ್ಯಸನಿಯನ್ನಾಗಿ ಮಾಡಿತು. ಮಾದಕ ವಸ್ತು ಖರೀದಿಗೆ ಹಣವಿಲ್ಲದಿದ್ದಾಗ, ಮೊದಲು ನನಗೆ ಡ್ರಗ್ಸ್ ಮಾರುತ್ತಿದ್ದವರೇ ಕೆಲಸ ನೀಡಿದರು. ಅವರು ಕೊಡುತ್ತಿದ್ದ ಮಾದಕ ವಸ್ತುಗಳನ್ನು ಪರಿಚಿತರಿಗೆ ಮಾರಾಟ ಮಾಡಿ ಅವರಿಗೆ ಹಣ ತಲುಪಿಸಬೇಕಿತ್ತು. ಅದಕ್ಕೆ ನನಗೆ ಕಮಿಷನ್ ಜತೆಗೆ, ಡ್ರಗ್ಸ್ ಕೂಡ ಸಿಗುತ್ತಿತ್ತು’ ಎಂದು ಆದರ್ಶ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.