ADVERTISEMENT

ಡ್ರಗ್ಸ್ ಜಾಲ ಭೇದಿಸಿದ ಸಿಸಿಬಿ: ₹ 35 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

‘ಡಾರ್ಕ್‌ನೆಟ್‌’ ಮೂಲಕ ಖರೀದಿ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:02 IST
Last Updated 29 ಮೇ 2021, 21:02 IST
ಜಪ್ತಿ ಮಾಡಲಾದ ಡ್ರಗ್ಸ್
ಜಪ್ತಿ ಮಾಡಲಾದ ಡ್ರಗ್ಸ್   

ಬೆಂಗಳೂರು: ಬಿಟ್‌ ಕಾಯಿನ್ ಬಳಸಿ ‘ಡಾರ್ಕ್‌ನೆಟ್‌’ ಮೂಲಕ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ನೈಜೀರಿಯಾ ಪ್ರಜೆ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

‘ನೈಜೀರಿಯಾದ ಜಾನ್ ಚುಕ್ವಾಕ್ (30), ಕೇರಳದ ಆದಿತ್ಯನ್ (29), ಸಿ.ಎಸ್. ಅಖಿಲ್ (25), ಬೆಂಗಳೂರಿನ ಶೆರ್ವಿನ್ ಸುಪ್ರಿತ್ ಜಾನ್ (26), ಅನಿಕೇತ್ ಎ. ಕೇಶವ್ (26) ಹಾಗೂ ಡಾನ್ಮಿಕ್ ಪೌಲ್ (30) ಬಂಧಿತರು. ಅವರಿಂದ 400 ಎಂಡಿಎಂಎ ಹಾಗೂ ಎಕ್ಸ್‌ಟೆಸ್ಸಿ ಮಾತ್ರೆಗಳು, 76 ಎಲ್‌ಎಸ್‌ಡಿ ಕಾಗದ ಚೂರುಗಳು, ಗಾಂಜಾ ಜಪ್ತಿ ಮಾಡಲಾಗಿದೆ. ಇದರ ಮೌಲ್ಯದ ₹ 35 ಲಕ್ಷವೆಂದು ಅಂದಾಜಿಸಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಾಡುಗೋಡಿ ಠಾಣೆ ವ್ಯಾಪ್ತಿಯ ಕನ್ನಮಂಗಲದ ಮನೆಯೊಂದರಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮನೆಗೆ ದಾಳಿ ಮಾಡಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಮೊಬೈಲ್‌ಗಳು, ಕಾರು ಹಾಗೂ ಬೈಕ್‌ ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ತಂತ್ರಜ್ಞಾನ ಬಳಸುವುದರಲ್ಲಿ ನಿಪುಣರಾಗಿದ್ದ ಆರೋಪಿಗಳು, ಡಾರ್ಕ್‌ನೆಟ್‌ ಮೂಲಕ ಅಂತರರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಸಂಪರ್ಕಿಸುತ್ತಿದ್ದರು. ಬಿಟ್‌ ಕಾಯಿನ್ ರೂಪದಲ್ಲಿ ಹಣ ಸಂದಾಯ ಮಾಡಿ ಡ್ರಗ್ಸ್ ಖರೀದಿಸುತ್ತಿದ್ದರು. ಕೋರಿಯರ್ ಮೂಲಕವೇ ಡ್ರಗ್ಸ್ ನಗರಕ್ಕೆ ಬರುತ್ತಿತ್ತು’ ಎಂದು ಹೇಳಿದರು.

ಲಾಕ್‌ಡೌನ್‌ನಲ್ಲೂ ಮಾರಾಟ: ‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ನಗರದಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ಅವಕಾಶ ನೀಡಲಾಗಿದೆ. ಇದೇ ಸಮಯದಲ್ಲೇ ಆರೋಪಿಗಳು, ನಗರದಲ್ಲಿ ಕಾರಿನಲ್ಲಿ ಸಂಚರಿಸಿ ಡ್ರಗ್ಸ್ ಮಾರುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಐಟಿ–ಬಿಟಿ ಕಂಪನಿ ಉದ್ಯೋಗಿಗಳು ಡ್ರಗ್ಸ್ ಖರೀದಿ ಮಾಡುತ್ತಿದ್ದರು. ಎಕ್ಸ್‌ಟೆಸ್ಸಿ ಒಂದು ಮಾತ್ರೆಯನ್ನು ₹ 4 ಸಾವಿರದಿಂದ ₹5 ಸಾವಿರಕ್ಕೆ ಮಾರುತ್ತಿದ್ದರು. ಎಲ್‌ಎಸ್‌ಡಿಯ ಕಾಗದ ಚೂರು ಒಂದಕ್ಕೂ ಅಷ್ಟೇ ದರವಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.