ADVERTISEMENT

ಅಂಬೇಡ್ಕರ್ ಪ್ರತಿಮೆ ಎದುರು ಶಾ ಕ್ಷಮೆಯಾಚಿಸಲಿ: ದಸಂಸ ಒಕ್ಕೂಟ

ಸಚಿವ ಅಮಿತ್‌ ಶಾ ವಜಾಕ್ಕೆ ದಸಂಸ ಒಕ್ಕೂಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:33 IST
Last Updated 23 ಜನವರಿ 2025, 14:33 IST
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು.    ಪ್ರಜಾವಾಣಿ ಚಿತ್ರ 
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು.    ಪ್ರಜಾವಾಣಿ ಚಿತ್ರ     

ಬೆಂಗಳೂರು: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಕುರಿತು ಸಂಸತ್‌ ಅಧಿವೇಶನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಒತ್ತಾಯಿಸಿತು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು, ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಅಮಿತ್ ಶಾ ಅವರು ಮಂಡಿಯೂರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಅವರು ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಹೇಳಿಕೆ ಖಂಡಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಾ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನ್ಯಾಯ ಬಯಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಹಿಂದೆ ದೇಶದ ದುಡಿಯುವ ಜನರು ಹಾಗೂ ಶೂದ್ರರನ್ನು ಮನುಸ್ಮೃತಿ ತುಳಿದಿದೆ. ತುಳಿಯುವ ಕಾಲನ್ನು ಮುರಿದಿದ್ದು ಸಂವಿಧಾನ. ಅಂಬೇಡ್ಕರ್ ಅವರ ಅನುಯಾಯಿಗಳೆಂದರೆ ಜೇನುಗೂಡು ಇದ್ದಂತೆ. ಅದಕ್ಕೆ ಕೈಯಿಟ್ಟರೆ ನಿಮ್ಮನ್ನು ಸರ್ವನಾಶ ಮಾಡುತ್ತದೆ. ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರ ಹಿಂದಿನಿಂದಲೂ ಅಂಬೇಡ್ಕರ್‌ ಅವರನ್ನು ಹೀಯಾಳಿಸುತ್ತಲೇ ಬಂದಿದೆ. ಅಂಬೇಡ್ಕರ್ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೊಲಗಲಿ. ಅಮಿತ್ ಶಾ ಅವರು ಅಂಬೇಡ್ಕರ್ ಅವರ ಪ್ರತಿಮೆ ಬಳಿ ಕ್ಷಮೆ ಕೇಳಬೇಕು ಹಾಗೂ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಯಲಿಗೆಳೆಯುತ್ತಿದಾರೆ. ಅದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿ, ಜೈಲಿಗೆ ಕಳಿಸುವ ಪಿತೂರಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಅಂಬೇಡ್ಕರ್ ಅವರು ನಮಗೆ ತಿಳಿವಳಿಕೆ ಕೊಟ್ಟಿದ್ದಾರೆ. ಕೋಮುವಾದದ ಸಂಚುಗಳನ್ನು ಬಯಲು ಮಾಡುವ ಶಕ್ತಿ ದೇಶದ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಇದೆ. ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಮುಖಂಡರಾದ ಜೀವನಹಳ್ಳಿ ವೆಂಟೇಶ್, ಎಸ್.ಬಾಲಕೃಷ್ಣ, ಇಂದಿರಾ ಕೃಷ್ಣಪ್ಪ, ಕೆ.ಎಂ.ರಾಮಚಂದ್ರಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.