ADVERTISEMENT

ದುಬಾರೆ ಅರಣ್ಯದ ರೆಸಾರ್ಟ್‌ ಮುಚ್ಚುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:08 IST
Last Updated 3 ಜುಲೈ 2019, 20:08 IST
   

ಬೆಂಗಳೂರು: ‘ಕೊಡಗು ಜಿಲ್ಲೆಯ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿರುವ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ಪಡೆದಿಲ್ಲ ಎಂದಾದರೆ ಮುಚ್ಚಲು ಆದೇಶಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಎಚ್ಚರಿಸಿದೆ.

ಈ ಕುರಿತಂತೆ ಕೊಡಗಿನ ವಿರೂಪಾಕ್ಷಪುರದ ಪಿ.ಎಸ್. ಮೋಹನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌.ಎಸ್. ಓಕಾ, ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಲ್‌.ರಾಜಣ್ಣ, ‘ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗೆ ಅನುಮತಿ ಪಡೆದಿಲ್ಲ. ರೆಸಾರ್ಟ್ ಚಟುವಟಿಕೆಯಿಂದ ಅರಣ್ಯ ಪ್ರದೇಶದಲ್ಲಿ ಪರಿಸರ ನಾಶವಾಗುತ್ತಿದೆ’ ಎಂದುಆಕ್ಷೇಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರಣ್ಯ ಪ್ರದೇಶದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ. ಒಂದು ವೇಳೆ ನಡೆಸುವುದಾದರೆ ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಈ ಪ್ರಕರಣದಲ್ಲಿ ಅನುಮತಿ ಪಡೆಯಲಾಗಿದೆಯೇ ಹೇಗೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.‘ಮಾಹಿತಿ ಒದಗಿಸಲು ಸಮಯಾವಕಾಶ ಬೇಕು’ ಎಂದು ಸರ್ಕಾರಿ ವಕೀಲರು ಕೋರಿದ ಕಾರಣ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.