ADVERTISEMENT

ಪೊಲೀಸ್ ವಿಚಾರಣೆ ಎದುರಿಸಿದ ದುನಿಯಾ ವಿಜಯ್

ಮಗಳ ಮೇಲೆ ಹಲ್ಲೆ ನಡೆಸಿದ ಆರೋಪ * ಸಿ.ಸಿ ಟಿ.ವಿಯ ಪೂರ್ತಿ ದೃಶ್ಯ ಬಹಿರಂಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 18:42 IST
Last Updated 24 ಅಕ್ಟೋಬರ್ 2018, 18:42 IST
   

ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಹಾಗೂ ಅವರ ಪುತ್ರಿ ಮೋನಿಕಾ ಬುಧವಾರ ಗಿರಿನಗರ ಪೊಲೀಸರಿಂದ ವಿಚಾರಣೆ ಎದುರಿಸಿದರು.

ವಿಜಯ್, ಅವರ ಎರಡನೇ ಪತ್ನಿ ಕೀರ್ತಿ ಗೌಡ ಸೇರಿದಂತೆ ಐದು ಮಂದಿ ವಿರುದ್ಧ ಮೋನಿಕಾ ಗಿರಿನಗರ ಠಾಣೆಗೆ ದೂರು ಕೊಟ್ಟಿದ್ದರು. ವಿಚಾರಣೆಗೆ ಬರುವಂತೆ ಆ ಐದೂ ಮಂದಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದರು. ಅಂತೆಯೇ ಬುಧವಾರ ಸಂಜೆ ಅವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದ್ದಾರೆ.

‘ಹೊಸಕೆರೆಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಸ್ನೇಹಿತರ ಜತೆ ಮಾತನಾಡುತ್ತ ಕುಳಿತಿದ್ದೆ. ಆಗ ಮೋನಿಕಾ ಬಂದು ಬಾಗಿಲು ಬಡಿದಳು. ನಾನು ಒಳಗೆ ಸೇರಿಸಲಿಲ್ಲ. ಇದರಿಂದ ಕೋಪಗೊಂಡ ಅವಳು, ಕಲ್ಲಿನಿಂದ ಬಾಗಿಲಿಗೆ ಹೊಡೆದು ಗಲಾಟೆ ಮಾಡಿದಳು. ಸ್ವಲ್ಪ ಸಮಯದ ನಂತರ ಹೊರಟು ಹೋದಳು. ಇಷ್ಟೂ ದೃಶ್ಯ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ವಿಜಯ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

ADVERTISEMENT

‘ನಾವು ಹೊರಗೇ ಹೋಗಿಲ್ಲ ಎಂದಮೇಲೆ ಆಕೆ ಮೇಲೆ ಹಲ್ಲೆ ನಡೆಸಲು ಹೇಗೆ ಸಾಧ್ಯ? ಯಾರದ್ದೋ ಚಿತಾವಣೆಗೆ ಮಗಳು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ. ಈ ಘಟನೆ ಕುರಿತು ಸೂಕ್ತ ತನಿಖೆ ಆಗಬೇಕೆಂದೇ ನಾನೂ ಬಯಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ವಿಜಯ್ ಸ್ನೇಹಿತರಾದ ಹೇಮಂತ್, ವಿನೋದ್ ಹಾಗೂ ಕಾರು ಚಾಲಕ ಮೊಹಮದ್ ಕೂಡ ಅದೇ ರೀತಿ ಹೇಳಿಕೆ ಕೊಟ್ಟಿದ್ದಾರೆ. ‘ಮೋನಿಕಾ ಬಂದಾಗ ನಾವು ಬಾಗಿಲು ತೆಗೆಯಲು ಹೋದೆವು. ವಿಜಯಣ್ಣ ಬೇಡ ಎಂದಿದ್ದಕ್ಕೆ ಸುಮ್ಮನೆ ಕುಳಿತೆವು. ಆಕೆಯೇ ಕೂಗಾಡಿಕೊಂಡು ಹೋದಳು’ ಎಂದಿದ್ದಾರೆ.

ಮುಖಾಮುಖಿ ಮೌನ: ವಿಜಯ್ ವಿಚಾರಣೆ ನಡೆಯುತ್ತಿದ್ದ ವೇಳೆಯೇ ಅವರ ಮೊದಲ ಪತ್ನಿ ನಾಗರತ್ನ ಕೂಡ ಮಗಳ ಜತೆ ಠಾಣೆಗೆ ಬಂದರು. ದಂಪತಿ ಮುಖಾಮುಖಿ ಎದುರಾದರೂ, ಯಾವುದೇ ಮಾತುಕತೆ ನಡೆಯಲಿಲ್ಲ.

‘ಕಾರಿನ ದಾಖಲೆಗಳನ್ನು ತೆಗೆದುಕೊಂಡು ಬರಲು ತಂದೆ ಮನೆಗೆ ಹೋಗಿದ್ದಾಗ ನನ್ನ ಮೇಲೆ ಹಲ್ಲೆ ನಡೆಯಿತು’ ಎಂದು ಮೋನಿಕಾ ಹೇಳಿದ್ದಾರೆ. ಬಾಗಿಲಿಗೆ ಕಲ್ಲಿನಿಂದ ಒಡೆದಿದ್ದನ್ನು ಒಪ್ಪಿಕೊಂಡ ಅವರು, ‘ತುಂಬ ಹೊತ್ತು ಕಾದರೂ ಬಾಗಿಲು ತೆಗೆಯಲಿಲ್ಲ. ಹೀಗಾಗಿ, ಸಿಟ್ಟಿನಲ್ಲಿ ಹಾಗೆ ಮಾಡಿದೆ. ಆ ನಂತರ ಏಕಾಏಕಿ ಹೊರಗೆ ಬಂದು ನನಗೆ ಹೊಡೆದರು’ ಎಂದೂ ದೂರಿದ್ದಾರೆ ಎನ್ನಲಾಗಿದೆ.

ಮೋನಿಕಾ ಪರ ವಕೀಲೆ ಮೀರಾ ರಾಘವ್, ‘ಮಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳುತ್ತಿರುವ ವಿಜಯ್, ಅಂದಿನ ಘಟನಾವಳಿಯ ಎಲ್ಲ ವಿಡಿಯೊವನ್ನೂ ಬಹಿರಂಗಪಡಿಸಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.