ಬೆಂಗಳೂರು: ಎಂಟು ವರ್ಷಗಳಿಂದ ಹಿಂದೆ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಶೇಕಡ 10ರಷ್ಟು ಪ್ರಗತಿ ಕಂಡಿದೆ.
ಬಿಬಿಎಂಪಿ ಅಧಿಕಾರಿಗಳು ಹಾಗೂ ಹೊಸ ಗುತ್ತಿಗೆದಾರರ ನಡುವೆ ಸಮನ್ವಯದ ಕೊರತೆಯಂತೆ 2023ರ ನವೆಂಬರ್‌ನಿಂದಲೂ ಕಾಮಗಾರಿ ಕುಂಟುತ್ತಲೇ ಸಾಗಿತ್ತು. ಅಂದಿನಿಂದ ಜನವರಿವರೆಗೆ ಶೇ 35ರಷ್ಟು ಮಾತ್ರ ಕಾಮಗಾರಿ ನಡೆದಿತ್ತು. ಆದರೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸ್ಪಷ್ಟ ಸೂಚನೆಯಿಂದ ಜನವರಿ 8ರಿಂದ ಫೆಬ್ರುವರಿ 11ರವರೆಗೆ ಶೇ 10ರಷ್ಟು ಪ್ರಗತಿಯಾಗಿದೆ.
2024ರ ನವೆಂಬರ್‌ನಲ್ಲಿ ಅಳವಡಿಸಲಾಗಿದ್ದ, ಹಿಂದಿನ ಗುತ್ತಿಗೆದಾರರು ನಿರ್ಮಿಸಿದ್ದ ಮೂರು ಸೆಗ್‌ಮೆಂಟ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅಂದಿನಿಂದ ಕಾಮಗಾರಿ ಬಹುತೇಕ ಸ್ಥಗಿತಗೊಂಡಿತ್ತು.
ಜನವರಿ 7ರಂದು ಸಭೆ ನಡೆಸಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು, ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಯೋಜನೆ ವಿಭಾಗದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು, ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರ ಅವರಿಗೆ 15 ದಿನಕ್ಕೊಮ್ಮೆ ಪರಿಶೀಲನೆಗೆ ಸೂಚಿಸಿದ್ದರು.
ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ರಾಮಲಿಂಗಾರೆಡ್ಡಿ ಅವರು, ಕೆಲಸದ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಇದೇ ರೀತಿ ಸಮನ್ವಯದಿಂದ ಕಾಮಗಾರಿ ನಡೆಸಿ, ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
‘ಮೇಲ್ಸೇತುವೆ ಕಾಮಗಾರಿಯಲ್ಲಿ ಒಂದು ತಿಂಗಳಲ್ಲಿ 43 ಸೆಗ್‌ಮೆಂಟ್‌ಗಳನ್ನು ಅಳವಡಿಸಲಾಗಿದೆ. ಸುಮಾರು 135 ಮೀಟರ್‌ನಷ್ಟು ಪ್ರಗತಿಯಾಗಿದೆ. ಕಟ್ಟಡ ತ್ಯಾಜ್ಯವನ್ನೂ ತೆರವುಗೊಳಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ಸಭೆಯಲ್ಲಿ ಆಶ್ವಾಸನೆ ನೀಡಿರುವಂತೆ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸಲು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಕಾಲಕ್ಕೆ ಬಿಲ್ ಪಾವತಿಸಲೂ ಹೇಳಲಾಗಿದೆ’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಯೋಜನೆ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರ, ಮುಖ್ಯ ಎಂಜಿನಿಯರ್ ಲೋಕೇಶ್ ಉಪಸ್ಥಿತರಿದ್ದರು.
‘ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ. 25 ಪ್ರಕರಣಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜಮೀನು ಕಳೆದುಕೊಳ್ಳುವವರಿಗೆ ಕೂಡಲೇ ನಗದು ಪರಿಹಾರ ಪಾವತಿಸುವಂತೆ ಬಿಬಿಎಂಪಿಯ ಭೂಸ್ವಾಧೀನ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸೇಂಟ್ ಜಾನ್ ಆಸ್ಪತ್ರೆಗೆ ಸಂಬಂಧಿಸಿದ ಭೂಸ್ವಾಧೀನದ ಬಗ್ಗೆ ಇತ್ಯರ್ಥವಾಗಬೇಕಿದೆ. ಪರ್ಯಾಯ ಜಮೀನು ನೀಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಅದನ್ನೂ ಅಂತಿಮಗೊಳಿಸಲಾಗುತ್ತದೆ. ಇನ್ನೆರಡು ತಿಂಗಳಲ್ಲಿ ಭೂಸ್ವಾಧೀನದ ಎಲ್ಲ ಪ್ರಕರಣಗಳನ್ನೂ ಇತ್ಯರ್ಥಪಡಿಸುವುದಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.