ADVERTISEMENT

ಇಡಿ ಪ್ರಕರಣ: ತನಿಖಾ ತಂಡದಲ್ಲಿದ್ದ ಮೂವರು ಎಸಿಪಿಗಳೂ ವರ್ಗ!

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 20:01 IST
Last Updated 14 ನವೆಂಬರ್ 2018, 20:01 IST

ಬೆಂಗಳೂರು: ‘ಇ.ಡಿ. ಡೀಲ್’ ಪ್ರಕರಣದ ತನಿಖಾ ತಂಡದಲ್ಲಿದ್ದ ಮೂವರು ಎಸಿಪಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಡಿಜಿಪಿ ನೀಲಮಣಿ ರಾಜು ಬುಧವಾರ ಆದೇಶ ಹೊರಡಿಸಿದ್ದಾರೆ.

ಪಿ.ಟಿ.ಸುಬ್ರಹ್ಮಣ್ಯ, ಎಂ.ಎಚ್.ಮಂಜುನಾಥ್ ಚೌಧರಿ ಹಾಗೂ ಮರಿಯಪ್ಪ ವರ್ಗವಾದ ಎಸಿಪಿಗಳು. ಅವರಿಂದ ತೆರವಾದ ಸ್ಥಾನಗಳಿಗೆ ಬಿ.ಬಾಲರಾಜು, ಶೋಭಾ ಕಟಾವ್ಕರ್ ಹಾಗೂ ಬಿ.ಆರ್.ವೇಣುಗೋಪಾಲ್ ಅವರನ್ನು ನಿಯೋಜಿಸಲಾಗಿದೆ. ‍ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮೂವರು ಅಧಿಕಾರಿಗಳು ವರ್ಗಾವಣೆ ಆಗಿರುವುದು ಇಲಾಖಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಜುನಾಥ್ ಚೌಧರಿ ನೇತೃತ್ವದ ತಂಡವು ಬಳ್ಳಾರಿಯಲ್ಲಿರುವ ರೆಡ್ಡಿ ಅವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಉಳಿದಿಬ್ಬರು ಎಸಿಪಿಗಳ ತಂಡಗಳು, ರೆಡ್ಡಿ ಅವರನ್ನು ಬಂಧಿಸಲು ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದವು.

ADVERTISEMENT

ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಕೋರಿಕೆ ಮೇರೆಗೇ ಡಿಜಿಪಿ ಈ ಮೂವರು ಎಸಿಪಿಗಳನ್ನು ಸಿಸಿಬಿಗೆ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್‌ಸ್ಪೆಕ್ಟರ್‌ಗಳಾದ ಸಿ.ನಿರಂಜನ್ ಕುಮಾರ್ ಮತ್ತು ಕೆ.ಅಂಜನ್ ಕುಮಾರ್ ಸಹ ಸಿಸಿಬಿಗೆ ವರ್ಗವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.