ADVERTISEMENT

ಪರಿಶಿಷ್ಟರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ, ₹120 ಕೋಟಿ ನಿಗದಿ: ಪ್ರಿಯಾಂಕ್ ಖರ್ಗೆ

ಈ ವರ್ಷ 400 ವಿದ್ಯಾರ್ಥಿಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:04 IST
Last Updated 7 ಡಿಸೆಂಬರ್ 2018, 19:04 IST
ಉಪಮುಖ್ಯಮಂತ್ರಿ ಪರಮೇಶ್ವರ ಅವರು ವಿದೇಶ ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ 'ಪ್ರಬುದ್ಧ' ಯೋಜನೆಗೆ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ 
ಉಪಮುಖ್ಯಮಂತ್ರಿ ಪರಮೇಶ್ವರ ಅವರು ವಿದೇಶ ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ 'ಪ್ರಬುದ್ಧ' ಯೋಜನೆಗೆ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ    

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸಲು ಈ ಸಾಲಿನಲ್ಲಿ ₹ 120 ಕೋಟಿ ಮೀಸಲಿಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪದವಿಯಲ್ಲಿ 250 ಮತ್ತು ಸ್ನಾತಕೋತ್ತರದಲ್ಲಿ 150 ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂದು ವಿದೇಶದಲ್ಲಿ ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ ‘ಪ್ರಬುದ್ಧ’ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದರು.

2001ರ ಸಾಲಿನಿಂದಲೂ ಈ ವರ್ಗದ ವಿದ್ಯಾರ್ಥಿಗಳನ್ನು ವಿದೇಶದಲ್ಲಿ ವ್ಯಾಸಂಗಕ್ಕಾಗಿ ಕಳುಹಿಸಲಾಗುತ್ತಿದೆ. ಈವರೆಗೆ 287 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ₹57.65 ಕೋಟಿ ಖರ್ಚು ಮಾಡಿದೆ. ಕಳೆದ ವರ್ಷದಿಂದ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಲು ಆಸಕ್ತಿ ತೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದರು.

ADVERTISEMENT

ವಿದೇಶದಲ್ಲಿ ವ್ಯಾಸಂಗ ಮಾಡುವ ಇಚ್ಛೆ ಹೊಂದಿರುವ ವಿದ್ಯಾರ್ಥಿಗಳ ಕುಟುಂಬದ ಆದಾಯ ಮಿತಿ ₹ 8 ಲಕ್ಷಗಳವರೆಗೆ ಇದ್ದರೆ, ವಿದೇಶಗಳಲ್ಲಿ ಶೇ 100ರಷ್ಟು ಉಚಿತ ಶಿಕ್ಷಣ ನೀಡಲಾಗುವುದು. ₹ 8 ಲಕ್ಷದಿಂದ ₹ 15 ಲಕ್ಷಗಳವರೆಗೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಮತ್ತು ₹ 15 ಲಕ್ಷ ಆದಾಯ ಮೀರಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ 33ರಷ್ಟು ವೆಚ್ಚ ಭರಿಸಲಾಗುವುದು. ವಿದ್ಯಾಭ್ಯಾಸದ ಎಲ್ಲ ವೆಚ್ಚ, ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಇತರ ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಮಾತನಾಡಿ, ‘ಎಸ್‌ಸಿ, ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವ ನಿರ್ಧಾರ ಅತ್ಯುತ್ತಮವಾದುದು. ನಾನು ಕೂಡ 1980ರಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡೇ ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ಮಾಡಿದ್ದೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರೂ ವಿದ್ಯಾರ್ಥಿ ವೇತನ ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದುದರಿಂದ ಉತ್ತಮ ಸಂವಿಧಾನ ನೀಡಲು ಸಾಧ್ಯವಾಯಿತು. ಅದೇ ರೀತಿಯಲ್ಲಿ ಮತ್ತೊಬ್ಬ ಅಂಬೇಡ್ಕರ್‌ ಹೊರಹೊಮ್ಮಬಹುದು’ ಎಂದು ಪರಮೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.