ADVERTISEMENT

ರೇಷ್ಮೆ ಇಲಾಖೆ ಸುಧಾರಣೆಗೆ ಪ್ರಯತ್ನ: ಡಾ. ಸಿ.ಎನ್. ಮಂಜುನಾಥ್

ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ಗೆ ‘ರೇಷ್ಮೆ ರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:04 IST
Last Updated 13 ಏಪ್ರಿಲ್ 2025, 16:04 IST
<div class="paragraphs"><p>ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ. ಬಾಲಸುಬ್ರಮಣಿಯನ್ ಅವರಿಗೆ ‘ರೇಷ್ಮೆ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p></div>

ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ. ಬಾಲಸುಬ್ರಮಣಿಯನ್ ಅವರಿಗೆ ‘ರೇಷ್ಮೆ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

   

ಬೆಂಗಳೂರು: ‘ರೇಷ್ಮೆ ಇಲಾಖೆಯನ್ನು ಸಶಕ್ತಗೊಳಿಸಬೇಕಿದೆ. ವಿಶೇಷ ರೇಷ್ಮೆ ವಲಯ ಸ್ಥಾಪಿಸಬೇಕಿದೆ. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡುತ್ತೇನೆ. ಇಲಾಖೆಯ ಸುಧಾರಣೆಗೆ ಪ್ರಯತ್ನಿಸುತ್ತೇನೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಭರವಸೆ ನೀಡಿದರು.

ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಅವರಿಗೆ ‘ರೇಷ್ಮೆ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ADVERTISEMENT

‘ರೇಷ್ಮೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ವಿ.ಬಾಲಸುಬ್ರಮಣಿಯನ್ ಅವರು, ತಾವು ಕೆಲಸ ಮಾಡಿದಷ್ಟು ಅವಧಿಯಲ್ಲೇ, ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದರು. ರಾಷ್ಟ್ರ ಮಟ್ಟದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸುವ ಕಾರ್ಯಯೋಜನೆಯನ್ನು ಸಾಕಾರಗೊಳಿಸಿದ್ದರು. ಅವರಲ್ಲಿದ್ದ ಪ್ರಾಮಾಣಿಕತೆ, ಸಕಾರಾತ್ಮಕ ನಿಲುವಿನಿಂದಾಗಿ ಇಷ್ಟೆಲ್ಲ ಪ್ರಗತಿ ಸಾಧಿಸಲು ಸಾಧ್ಯವಾಯಿತು’ ಎಂದು ಶ್ಲಾಘಿಸಿದರು.

ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಮಾತನಾಡಿ, ‘ಇವತ್ತು ಅಧಿಕಾರಸ್ಥರು, ಶ್ರೀಮಂತರಿಗೆ ಬೆಲೆ ಇದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲ ಎಂಬ ಸನ್ನಿವೇಶವಿದೆ. ಆದರೆ, ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನು ನಿವೃತ್ತಿ ನಂತರವೂ ಗೌರವಿಸುತ್ತಿರುವುದು ಅಭಿನಂದನೀಯ ನಡೆ. ಉತ್ತಮ ಕಾರ್ಯಗಳು ಎಂದೆಂದೂ ನೆನೆಪಿನಲ್ಲಿರುತ್ತವೆ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಲಸುಬ್ರಮಣಿಯನ್ ಅವರು, ‘ಶತಮಾನಗಳ ಇತಿಹಾಸವಿರುವ ರೇಷ್ಮೆ ಕೃಷಿಯನ್ನು ಸರ್ಕಾರ ರಕ್ಷಿಸಬೇಕಿದೆ. ರೇಷ್ಮೆ ಇಲಾಖೆಯಲ್ಲಿ ಶೇಕಡ 70ರಷ್ಟು ಸಿಬ್ಬಂದಿ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲಾಖೆಯ ಬಲವರ್ಧನೆಗೊಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ರೇಷ್ಮೆ ಸಂಸ್ಥೆ ಗೌರವಾಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಬಿ. ದಂಡಿನ, ಸವಿತಾ ಅಮರಶೆಟ್ಟಿ, ಎಂ. ರಾಮಚಂದ್ರಗೌಡ, ಇ. ಮುನಿರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.