ADVERTISEMENT

ಈಜಿಪುರ ಮೇಲ್ಸೇತುವೆ: ಕಾಮಗಾರಿಗೆ ಹಲವು ವಿಘ್ನ

ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಐಐಎಸ್ಸಿ ವರದಿ ನಂತರವಷ್ಟೇ ಕಾಮಗಾರಿ

ಆರ್. ಮಂಜುನಾಥ್
Published 2 ಡಿಸೆಂಬರ್ 2023, 1:05 IST
Last Updated 2 ಡಿಸೆಂಬರ್ 2023, 1:05 IST
ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸುವ ಕಾಮಗಾರಿ ಶುಕ್ರವಾರ ಆರಂಭಗೊಂಡಿದ್ದು, ಕೆಲವು ಮರಗಳನ್ನು ತೆರವುಗೊಳಿಸಲಾಯಿತು
ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸುವ ಕಾಮಗಾರಿ ಶುಕ್ರವಾರ ಆರಂಭಗೊಂಡಿದ್ದು, ಕೆಲವು ಮರಗಳನ್ನು ತೆರವುಗೊಳಿಸಲಾಯಿತು   

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ರೂಪುಗೊಂಡಿದ್ದ ಈಜಿಪುರ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಕಾಮಗಾರಿಯ ಪುನರಾರಂಭಕ್ಕೆ ಹಲವು ವಿಘ್ನಗಳು ಎದುರಾಗಿವೆ.

ಮೇಲ್ಸೇತುವೆ ಪೂರ್ಣಗೊಳಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆತಿದೆ. ಆದರೆ, ಐಐಎಸ್‌ಸಿ ತಾಂತ್ರಿಕ ವರದಿ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಮರಗಳ ತೆರವಿಗೆ ತಡೆಯಂತಹ ಹಲವು ಅಡೆ–ತಡೆಗಳು ಮೊದಲ ದಿನದಿಂದಲೇ ಕಾಡಲಾರಂಭಿಸಿವೆ.

ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಅದನ್ನು ಯಾವ ರೀತಿಯಲ್ಲಿ ಮುಂದುವರಿಸಬೇಕು. ಯಾವ ಮುನ್ನೆಚ್ಚರಿಕೆ ಕ್ರಮ ಅಥವಾ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂಬ ತಾಂತ್ರಿಕ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನೀಡಬೇಕಿದೆ. ಈ ವರದಿ ಲಭ್ಯವಾಗಲು ಎರಡು ತಿಂಗಳಾಗಲಿದೆ. ವರದಿ ಬಂದ ನಂತರವಷ್ಟೇ ಮೂಲ ಕಾಮಗಾರಿ ಆರಂಭವಾಗಲಿದೆ.

ADVERTISEMENT

ಇನ್ನು ಕೇಂದ್ರೀಯ ಸದನ, ಸೇಂಟ್‌ ಜಾನ್ಸ್‌ ಆಸ್ಪತ್ರೆ, ಜಲಮಂಡಳಿಯ ಕಟ್ಟಡಗಳು ಸೇರಿದಂತೆ ಖಾಸಗಿ ಕಟ್ಟಡಗಳ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಕಟ್ಟಡ ಹಾಗೂ ಕಾಂಪೌಂಡ್‌ಗಳ ಮೇಲೆ ಅಗತ್ಯವಿರುವ ಭೂಮಿಯ ಗುರುತು ಹಾಕಲಾಗಿದೆ. ಆದರೆ, ಅದನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮತ್ತೆ ಶುರುವಾಗಬೇಕಿದೆ.

‘ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ನಗದನ್ನು ಬಯಸಿದ್ದರು. ಈಗ ಮತ್ತೆ ಮಾತುಕತೆ ನಡೆಸಿ ಎಲ್ಲವನ್ನೂ ಅಂತಿಮಗೊಳಿಸಬೇಕಿದೆ. ಸರ್ವೆ ಕಾರ್ಯವನ್ನೂ ನಡೆಸಬೇಕಿದೆ. ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಯೋಗೇಶ್‌ ತಿಳಿಸಿದರು.

‘ಸರ್ವೆ ಕೈಗೊಂಡು, ಸರ್ಕಾರಿ ಸಂಸ್ಥೆಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಿ ಪರಿಹಾರವನ್ನು ನಿರ್ಧರಿಸಲಾಗುತ್ತದೆ. ಖಾಸಗಿಯವರೊಂದಿಗೂ ಮಾತುಕತೆ ನಡೆಸಲಾಗುತ್ತದೆ. ಇದೆಲ್ಲವೂ ಮುಗಿಯಲು ಎರಡು–ಮೂರು ತಿಂಗಳು ಬೇಕು’ ಎಂದರು.

‘ಮರಗಳನ್ನು ತೆರವು ಮಾಡದೆ ಮೇಲ್ಸೇತುವೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಭೆ ನಡೆಸಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು. ಅರಣ್ಯ ವಿಭಾಗದೊಂದಿಗೆ ಚರ್ಚಿಸಿ, ಕಾನೂನು ಕೋಶದ ಸಲಹೆ ಮೇರೆಗೆ ಮುಂದುವರಿಯಲಾಗುತ್ತದೆ’ ಎಂದು ಹೇಳಿದರು.

‘ಮೇಲ್ಸೇತುವೆಯ ಎಲ್ಲ ಕೆಲಸಗಳನ್ನೂ ಆರಂಭಿಸಲು ಇನ್ನೂ ಮುರ್ನಾಲ್ಕು ತಿಂಗಳು ಬೇಕು. ಪ್ಲಾಂಟ್‌ನಲ್ಲಿ ಪ್ರಾಥಮಿಕ ಕೆಲಸ ಹಾಗೂ ದೊಮ್ಮಲೂರು ಭಾಗದಲ್ಲಿ ರ್‍ಯಾಂಪ್‌ ಕಾಮಗಾರಿಯನ್ನು ಆರಂಭಿಸಿದ್ದೇವೆ. ಇಲ್ಲೂ ಮರಗಳು ತೆರವಾದರೆ ಮಾತ್ರ ಕೆಲಸವಾಗುತ್ತದೆ’ ಎಂದು ಗುತ್ತಿಗೆದಾರರ ಯೋಜನೆ ವ್ಯವಸ್ಥಾಪಕ ಸುರೇಶ್ ತಿಳಿಸಿದರು.

ಮರಗಳ ತೆರವಿಗೆ ವಿರೋಧ

‘ಈಜಿಪುರ ಮೇಲ್ಸೇತುವೆ ನಿರ್ಮಾಣ ಪೂರ್ಣಗೊಳಿಸಲು 67 ಮರಗಳನ್ನು ಕಡಿಯಲು ಸಮಿತಿಯಲ್ಲಿ ಅನುಮೋದನೆ ನೀಡಲಾಗಿದ್ದು ಅದನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಕೆಲವು ಪರಿಸರ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಶುಕ್ರವಾರ ಆರಂಭವಾಗಿದ್ದ ಮರಗಳ ತೆರವು ಕಾರ್ಯವನ್ನು ನಿಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್‌ ಸ್ವಾಮಿ ತಿಳಿಸಿದರು.

‘ಕಾಮಗಾರಿಗೆ ತಡೆಯಾಗಿರುವ ರೆಂಬೆ–ಕೊಂಬೆಗಳನ್ನು ಕಡಿದು 50–60 ವರ್ಷಗಳ ಮರಗಳನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ. ಅಲ್ಲದೆ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ನಕ್ಷೆಯನ್ನು ಬದಲಾಯಿಸಿಕೊಳ್ಳಲೂ ಬಿಬಿಎಂಪಿಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜಾಕೋಬ್‌ ತಿಳಿಸಿದರು.

2014ರಲ್ಲಿ ರೂಪುಗೊಂಡ ಯೋಜನೆ

ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ (ಈಜಿಪುರ) ಎಲಿವೇಟೆಡ್‌ ಕಾರಿಡಾರ್‌ 2.5 ಕಿ.ಮೀ. ಉದ್ದದ ಮೇಲ್ಸೇತುವೆಯಾಗಿದೆ. ಈ ಯೋಜನೆಯನ್ನು 2014ರಲ್ಲಿ ರೂಪಿಸಲಾಗಿತ್ತು. 2017ರಲ್ಲಿ ₹157.66 ಕೋಟಿಗೆ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2019ರೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಗುತ್ತಿಗೆದಾರರು ವಿಳಂಬ ಮಾಡಿದರು.

ನಾಲ್ಕು ವರ್ಷ ಏಳು ತಿಂಗಳಾದರೂ ಶೇ 42ರಷ್ಟು ಮಾತ್ರ ಕಾಮಗಾರಿ ಮುಗಿದಿತ್ತು. ₹75.11 ಕೋಟಿ ಹಣವನ್ನೂ ಅವರಿಗೆ ಪಾವತಿಸಲಾಗಿತ್ತು.  ಮೇಲ್ಸೇತುವೆ ಕಾಮಗಾರಿ ವಿಳಂಬವಾದ್ದರಿಂದ ಹೈಕೋರ್ಟ್‌ಗೆ ಆದಿನಾರಾಯಣ ಶೆಟ್ಟಿ ರಿಟ್‌ ಸಲ್ಲಿದ್ದರು. 2022ರ ಫೆ.17ರಂದು ತೀರ್ಪು ನೀಡಿದ್ದ ಹೈಕೋರ್ಟ್‌ ಟೆಂಡರ್‌ ರದ್ದು ಮಾಡಿ ಹೊಸದಾಗಿ ಟೆಂಡರ್‌ ಕರೆದು ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ಸೂಚಿಸಿತ್ತು. ಆದರೆ ಬಿಬಿಎಂಪಿಯ ವಿಳಂಬ ನೀತಿಯಿಂದ ನಾಲ್ಕನೇ ಬಾರಿಗೆ ಆಹ್ವಾನಿಸಲಾಗಿದ್ದ ಟೆಂಡರ್‌ ಅನ್ನು 2023ರ ಮಾರ್ಚ್‌ನಲ್ಲಿ ಒಪ್ಪಲಾಗಿತ್ತು.

ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ ಅದನ್ನು ಆಗಸ್ಟ್‌ನಲ್ಲಿ ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಲಾಗಿತ್ತು. ಸೆ.7ರಂದು ಅನುಮೋದನೆ ದೊರೆತರೂ ₹176.11 ಕೋಟಿಗೆ ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯೊಂದಿಗೆ ‘ಟರ್ನ್‌ ಕೀ ಲಂಪ್‌ಸಮ್‌’ ಗುತ್ತಿಗೆಯ ಒಪ್ಪಂದವನ್ನು ನ.17ರಂದು ಮಾಡಿಕೊಂಡು ಕಾರ್ಯಾದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.