ADVERTISEMENT

ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಆಮಿಷ: ₹ 1.80 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 3:55 IST
Last Updated 16 ಜುಲೈ 2022, 3:55 IST
   

ಬೆಂಗಳೂರು: ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಆಮಿಷವೊಡ್ಡಿ ಜನರಿಂದ ₹ 1.80 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೀರೇಂದ್ರಬಾಬು, ರವಿತೇಜಸ್ ಹಾಗೂ ವಿಜಯ ನಿರಂಜನ ರಾವ್ ಬಂಧಿತರು. ಹಣ ಕಳೆದುಕೊಂಡಿದ್ದ ಬಸವರಾಜ್ ಗೋಸಲ ಎಂಬುವರು ನೀಡಿದ್ದ ದೂರಿನಡಿ ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಾನಾ ಆಮಿಷವೊಡ್ಡಿ ವಂಚನೆ: ‘ಆರೋಪಿಗಳು ಆರ್ಯನ್ ಇನ್ಫೋಟೆಕ್ ಸಂಸ್ಥೆ, ವಿ–ಕೇರ್ ಆನ್‌ಲೈನ್ ಲರ್ನಿಂಗ್ ಆ್ಯಪ್, ಎಎನ್‌ಎನ್‌ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ರಕ್ಷಣಾ ಪಡೆ ಸಂಘಟನೆ ಕಟ್ಟಿಕೊಂಡಿದ್ದರು. ವಿನ್ಯೂಸ್–24 ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಸಿನಿಮಾ ನಿರ್ಮಾಪಕರೂ ಆಗಿದ್ದರು’ ಎನ್ನಲಾಗಿದೆ. ‘ಕರ್ನಾಟಕ ರಕ್ಷಣಾ ಪಡೆ ಸಂಘಟನೆಯ ತಾಲ್ಲೂಕು ಘಟಕಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ವಿವಿಧ ಹುದ್ದೆ ನೀಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸಿದ್ದರು. ಸರ್ಕಾರಿ ಶಾಲೆ ಮಕ್ಕಳಿಗೆ ಆನ್‌ಲೈನ್‌ ಮೂಲಕ ಉಚಿತ ಶಿಕ್ಷಣ ನೀಡುವುದಾಗಿ ಹೇಳಿ ಜನರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದರು.’

ADVERTISEMENT

‘ರಾಷ್ಟ್ರೀಯ ಜನಹಿತ ಪಕ್ಷ ಸಹ ಸ್ಥಾಪಿಸಿದ್ದ ಆರೋಪಿಗಳು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿದ್ದರು. ಇದನ್ನು ನಂಬಿ ಹಲವರು ಹಣ ನೀಡಿದ್ದರು. ಇದುವರೆಗೂ ₹ 1.80 ಕೋಟಿ ಸಂಗ್ರಹಿಸಿರುವುದಾಗಿ ದೂರುದಾರ ತಿಳಿಸಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.