ADVERTISEMENT

ಚುನಾವಣೆ ನಿಲ್ಲುತ್ತೆ, ಸರ್ಕಾರಕ್ಕೆ ಬೇಕಿರುವುದು ಅದೇ: ಡಾ.ಸಿ.ಎಸ್.ದ್ವಾರಕಾನಾಥ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:00 IST
Last Updated 4 ಆಗಸ್ಟ್ 2022, 21:00 IST
   

ಬೆಂಗಳೂರು: ‘ಸರ್ಕಾರ ‍ಪ್ರಕಟಿಸಿರುವ ಬಿಬಿಎಂಪಿ ವಾರ್ಡ್‌ ಮೀಸಲಾತಿಯನ್ನು ಇಟ್ಟುಕೊಂಡು ಯಾರೇ ನ್ಯಾಯಾಲಯದ ಬಾಗಿಲು ತಟ್ಟಿದರೂ ಇಡೀ ಚುನಾವಣೆ ನಿಲ್ಲುತ್ತೆ. ಸರ್ಕಾರಕ್ಕೆ ಬೇಕಿರುವುದೂ ಇದೇ. ಸರ್ಕಾರಕ್ಕೆ ನಿಜಕ್ಕೂ ಹಿಂದುಳಿದ ವರ್ಗಗಳ ಬಗ್ಗೆ ಕನಿಷ್ಠ ಕಾಳಜಿ, ಬದ್ಧತೆ ಇದ್ದಿದ್ದರೆ ಇಂತಹ ಕಾಟಾಚಾರದ ಪ್ರಕ್ರಿಯೆಗೆ ಮುಂದಾಗುತ್ತಿರಲಿಲ್ಲ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅದ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಟೀಕಿಸಿದ್ದಾರೆ.

‘ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2010ರಲ್ಲಿ, ಕೃಷ್ಣಮೂರ್ತಿ ಹಾಗೂ ಭಾರತ ಒಕ್ಕೂಟ ಸರ್ಕಾರ ಪ್ರಕರಣದಲ್ಲಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ, ಕಟ್ಟುನಿಟ್ಟಿನ ವಿಶ್ಲೇಷಣೆಗೆ ಒಳಪಡಿಸಿ, ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಬೇಕು ಎಂದು ತೀರ್ಪು ನೀಡಿದೆ. 12 ವರ್ಷಗಳ ನಂತರ ಕರ್ನಾಟಕ ಸರ್ಕಾರ ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅಧ್ಯಕ್ಷತೆಯ ಆಯೋಗವೊಂದನ್ನು ರಚಿಸಿ, ಮೂರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಸರ್ಕಾರಕ್ಕೆ ವರದಿ ನೀಡಬೇಕೆಂದು ತಾಕೀತು ಮಾಡಿತು. ಸರ್ಕಾರ ನೀಡಿರುವ ಈ ಕಾಲಾವಧಿಯಿಂದಲೇ ಹಿಂದುಳಿದ ವರ್ಗಗಳ ಬಗ್ಗೆ ಅದಕ್ಕಿರುವ 'ಬದ್ಧತೆ' ಏನೆಂದು ಅರ್ಥವಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ನ್ಯಾ‌. ಭಕ್ತವತ್ಸಲ ಅವರು ‘ಸಂತೆ ಸಮಯಕ್ಕೆ ಮೂರು ಮೊಳ ನೇಯ್ದಂತೆ’ ವರದಿಯನ್ನೂ ಕೊಟ್ಟರು. ಆದರೆ, ಸರ್ಕಾರ ಸದರಿ ವರದಿಯನ್ನುಪ್ರಕಟಿಸಲಿಲ್ಲ, ಅನುಷ್ಠಾನಕ್ಕೆ ತರಲೂ ಇಲ್ಲ. ವರದಿಯಲ್ಲಿ ಏನಿದೆಯೆಂಬ ವಿವರ ಯಾರಿಗೂ ಗೊತ್ತಿಲ್ಲ. ಇದರ ಕುರಿತು ಸರ್ಕಾರದ ಪ್ರಕಟಣೆಯೂ ಹೊರಬೀಳಲಿಲ್ಲ. ಹೀಗಿರುವಾಗ ಬಿಬಿಎಂಪಿ ಚುನಾವಣೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಮಾತ್ರ ಆಶ್ಚರ್ಯವೆಂಬಂತೆ ಪ್ರಕಟವಾಗಿದೆ’ ಎಂದಿದ್ದಾರೆ.

ADVERTISEMENT

‘ಈ ಪಟ್ಟಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ಬದ್ಧವಾಗಿದೆಯೋ ಇಲ್ಲವೋ ಗೊತ್ತಿಲ್ಲ ಅಥವಾ ನ್ಯಾ. ಭಕ್ತವತ್ಸಲ ಆಯೋಗ ನೀಡಿರುವ ವರದಿಯ ಆಧಾರದ ಮೇಲಿದೆಯೋ ಅದೂ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಿದೆಯೋ ಎಂಬುದು ಪ್ರಶ್ನಾರ್ಹ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.