ADVERTISEMENT

ದಟ್ಟಣೆ ತಡೆಗೆ ಎತ್ತರಿಸಿದ ಮಾರ್ಗದ ಸೂತ್ರ

ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ₹ 15,825 ಕೋಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 19:59 IST
Last Updated 5 ಜುಲೈ 2018, 19:59 IST
   

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಯೋಜನೆ ಬಹುಕಾಲದಿಂದ ಶೈತ್ಯಾಗಾರದಲ್ಲಿತ್ತು. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಿಬಿಎಂಪಿ ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಪ್ರಕಟಿಸಿದ್ದರು.

ಇದನ್ನು ಅನುಷ್ಠಾನ ಮಾಡಲು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಆಸಕ್ತಿ ತೋರಿದ್ದರು. ಉಕ್ಕಿನ ಮೇಲ್ಸೇತುವೆ ಯೋಜನೆ ಕೈಬಿಟ್ಟ ಬಳಿಕ ಈ ಯೋಜನೆ ಮುನ್ನಲೆಗೆ ಬಂದಿತ್ತು. ಪೂರ್ವ ಕಾರ್ಯಸಾಧ್ಯತಾ ವರದಿಯನ್ನೂ ತಯಾರಿಸಲಾಗಿತ್ತು. ಯೋಜನೆಯನ್ನು ಕಾರ್ಯಗತ ಮಾಡಲು ದೋಸ್ತಿ ಸರ್ಕಾರ ಸಂಕಲ್ಪ ಮಾಡಿದೆ.

ADVERTISEMENT

ಮುಂದಿನ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ₹ 15,825 ಕೋಟಿ ವೆಚ್ಚದಲ್ಲಿ ಈ ಕಾರಿಡಾರ್‌ ನಿರ್ಮಾಣವಾಗಲಿದೆ.

ಮೆಟ್ರೊ ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಯನ್ನು ತರಲಾಗುತ್ತಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಇದರ ಅನುಷ್ಠಾನದ ಹೊಣೆ ವಹಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹ 1 ಸಾವಿರ ಕೋಟಿ ಮೀಸಲಿರಿಸಲಾಗಿದೆ.

ನಗರದ ಉತ್ತರ – ದಕ್ಷಿಣ ಹಾಗೂ ಪೂರ್ವ – ಪಶ್ಚಿಮ ಭಾಗಗಳ ಕಾರಿಡಾರ್‌ ರಸ್ತೆ ನಿರ್ಮಾಣವಾಗಲಿದೆ. ಇವುಗಳಿಗೆ ಮೂರು ಸಂಪರ್ಕ ಕಾರಿಡಾರ್‌ ರಸ್ತೆಗಳು ನಿರ್ಮಾಣಗೊಳ್ಳಲಿವೆ. ಒಟ್ಟು 95 ಕಿಲೋಮೀಟರ್‌ ಉದ್ದದ ಮಾರ್ಗವಿದು.

ನಗರದ ವಿಪರೀತ ಸಂಚಾರ ದಟ್ಟಣೆಯನ್ನು ನಿಭಾಯಿಸಲು ಈ ಯೋಜನೆ ನೆರವಾಗಲಿದೆ. ಸುಗಮ, ಅಡೆತಡೆರಹಿತ ಪ್ರಯಾಣಕ್ಕೆಡ ಇದು ಅನುಕೂಲ ಕಲ್ಪಿಸಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.

ರಸ್ತೆ ಮೂಲಕ ಪ್ರಯಾಣಿಸಿದವರು ಮೆಟ್ರೊ ನಿಲ್ದಾಣಗಳನ್ನು ತಲುಪಲು ಸುಲಭವಾಗುವಂತೆ ರಸ್ತೆಗಳ ವಿನ್ಯಾಸ ಮತ್ತು ಸಂಪರ್ಕ ವ್ಯವಸ್ಥೆ ಇರಲಿದೆ. ಖಾಸಗಿ ಸಹಭಾಗಿತ್ವದ ಯೋಜನೆ ಜಾರಿಗೆ ಬಂದಲ್ಲಿ ಇದು ಟೋಲ್‌ ರಸ್ತೆಯಾಗಿ ಕಾರ್ಯನಿರ್ವಹಿಸಲಿದೆ. ಆದರೆ, ಗಿಜಿಗುಡುವ ಟ್ರಾಫಿಕ್‌ನಲ್ಲಿ ಸಿಲುಕುವುದಕ್ಕಿಂತ ಈ ಯೋಜನೆ ಜಾರಿಗೆ ಬಂದಲ್ಲಿ ಒಳ್ಳೆಯದು ಎನ್ನುತ್ತಾರೆ ನಾಗರಿಕರು.

ಇಡೀ ನಗರದ ನಾಲ್ಕೂ ದಿಕ್ಕುಗಳನ್ನು ಈ ಮಾರ್ಗ ಸಂಪರ್ಕಿಸಲಿದೆ. ಕೆಆರ್‌ಡಿಸಿಎಲ್‌ ಈ ಬಗ್ಗೆ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ.

‘ಈ ರಸ್ತೆಗಳು ನಿರ್ಮಾಣಗೊಂಡರೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ 20 ನಿಮಿಷ, ಕೆ.ಆರ್‌ ಪುರದಿಂದ ಗೊರಗುಂಟೆಪಾಳ್ಯಕ್ಕೆ 21 ನಿಮಿಷ ಮತ್ತು ನೈಸ್‌ ರಸ್ತೆಯಿಂದ ವೈಟ್‌ಫೀಲ್ಡ್‌ವರೆಗೆ 24 ನಿಮಿಷಗಳಲ್ಲಿ ಪ್ರಯಾಣಿಸಬಹುದು’ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

**

ನಗರ ಅಭಿವೃದ್ಧಿಗೆ ಒಂದಿಷ್ಟು ಆದ್ಯತೆ...

ಬೆಂಗಳೂರು: ನಗರ ಅಭಿವೃದ್ಧಿ ಸಂಬಂಧಿಸಿದಂತೆ ಬಜೆಟ್‌ ಒಂದಿಷ್ಟು ಯೋಜನೆಗಳನ್ನು ಘೋಷಿಸಿದೆ.

‌ಹಲವು ಕಾರ್ಯಕ್ರಮಗಳು ಈ ಹಿಂದೆ ಸಿದ್ದರಾಮಯ್ಯ ಅವರು ಘೋಷಿಸಿದ ಯೋಜನೆಗಳ ಪುನರಾವರ್ತನೆಯೇ ಇದೆ. ಈ ಬಾರಿ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ಕೊಡಲಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನ ಹಂಚಿಕೆ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ 2,157, ಎರಡನೇ ಹಂತದಲ್ಲಿ 3 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು. ಮುಖ್ಯಮಂತ್ರಿ ವಸತಿ ಯೋಜನೆಯಡಿ ಆಯ್ದ ಸ್ಥಳಗಳಲ್ಲಿ ನೆಲಮಹಡಿ ಸಹಿತ 14 ಅಂತಸ್ತುಗಳ ಕಟ್ಟಡ ನಿರ್ಮಿಸಿ ಬಡವರಿಗೆವಸತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ನಗರದ ಹೊರವಲಯದಲ್ಲಿ 65 ಕಿಲೋಮೀಟರ್‌ ಉದ್ದದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ₹ 11,950 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ನಗರದ ಕೊಳಚೆ ನೀರಿನಲ್ಲಿ ಹೆಚ್ಚು ರಾಸಾಯನಿಕ ಅಂಶಗಳು ಕಂಡು ಬಂದಿರುವ ಬಗ್ಗೆ ಉಲ್ಲೇಖಿಸಿದ ಮುಖ್ಯಮಂತ್ರಿ, ‘ಈ ನೀರು ನದಿಗೆ ಸೇರಿದಾಗ ಅದೂ ಕಲುಷಿತಗೊಳ್ಳುತ್ತದೆ. ಅದಕ್ಕಾಗಿ ನಗರದ ಹಲವೆಡೆ ರಾಸಾಯನಿಕ ತ್ಯಾಜ್ಯ ವಸ್ತುಗಳ ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗುತ್ತದೆ’ ಎಂದು ಹೇಳಿದರು.

ಶುದ್ಧೀಕರಣದ ಭಾಗವಾಗಿ ಪೀಣ್ಯ ಕೈಗಾರಿಕಾ ವಲಯದಲ್ಲಿ ರಾಸಾಯನಿಕ ತ್ಯಾಜ್ಯ ವಸ್ತುಗಳ ಶುದ್ಧೀಕರಣ ಘಟಕ ನಿರ್ಮಿಸಲು ₹ 10 ಕೋಟಿ ಒದಗಿಸುವ ಭರವಸೆ ನೀಡಲಾಗಿದೆ.

**

ಮೆಟ್ರೊ 3ನೇ ಹಂತದ ಅಧ್ಯಯನ

ಬೆಂಗಳೂರು: ಮೆಟ್ರೊ ರೈಲು ಯೋಜನೆಯ ಹಂತ – 3ರ ಮಾರ್ಗದ ಅಧ್ಯಯನ ನಡೆಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಮೆಟ್ರೊ ಮೊದಲ ಹಂತ 2017ರ ಜೂನ್‌ 16ಕ್ಕೆ ಪೂರ್ಣಗೊಂಡಿತ್ತು. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ, ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಎರಡು ಮಾರ್ಗಗಳಲ್ಲಿ ರೈಲು ಸಂಚಾರ ನಡೆಯುತ್ತಿದೆ. ಒಟ್ಟು 42.3 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಈಗ ರೈಲು ಓಡಾಡುತ್ತಿದೆ. ಇತ್ತೀಚೆಗಷ್ಟೇ 6 ಬೋಗಿಗಳ ರೈಲು ಸಂಚಾರ ಆರಂಭವಾಗಿದೆ. ಮೊದಲ ಹಂತಕ್ಕೆ ₹ 14,405 ಕೋಟಿ ವೆಚ್ಚವಾಗಿದೆ. ಕೆಲವೆಡೆ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ.

3ನೇ ಹಂತದ ಅಧ್ಯಯನ ವಿವರ ಹೀಗಿದೆ.

ಮಾರ್ಗ; ಅಂತರ (ಕಿಲೋಮೀಟರ್‌ಗಳಲ್ಲಿ)

ಜೆ.ಪಿ.ನಗರ – ಕೆ.ಆರ್‌.ಪುರ; 42.75

ಟೋಲ್‌ಗೇಟ್‌– ಕಡಬಗೆರೆ; 12.5

ಗೊಟ್ಟಿಗೆರೆ; ಬಸವಪುರ; 3.07

ಆರ್‌.ಕೆ.ಹೆಗ್ಡೆ ನಗರ – ಏರೋಸ್ಪೇಸ್‌ ಪಾರ್ಕ್‌; 18.95

ಕೋಗಿಲು ಕ್ರಾಸ್‌; ರಾಜಾನುಕುಂಟೆ; 10.6

ಇಬ್ಬಲೂರು; ಕರ್ಮಲ್‌ರಾಮ್‌; 6.67

ಒಟ್ಟು 95 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.