ADVERTISEMENT

14 ಕಾರುಗಳ ಗಾಜು ಪುಡಿ ಪುಡಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಕುಡಿದ ಅಮಲಿನಲ್ಲಿ ಕೃತ್ಯ; ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 20:11 IST
Last Updated 26 ಸೆಪ್ಟೆಂಬರ್ 2021, 20:11 IST

ಬೆಂಗಳೂರು: ಸಾರ್ವಜನಿಕರ ಮನೆಗಳ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದ ಐವರು ಆರೋಪಿಗಳನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೈ.ಆರ್. ಮಯಾಂಕ್, ರೋಹಿತ್ ಸೈನಿ, ಅದ್ನಾನ್ ಫಹಾದ್, ಸಕ್ಕಂ ಭಾರದ್ವಾಜ್ ಹಾಗೂ ಜಯೇಸ್ ಬಂಧಿತರು. ಒಬ್ಬನ ಹೆಸರು ಗೊತ್ತಾಗಿಲ್ಲ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಆರೋಪಿಗಳು, ನಗರದ ಎಂಜಿನಿಯರಿಂಗ್ ಕಾಲೇ
ಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಂದ ಬ್ಯಾಟ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕುಡಿದ ಅಮಲಿನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಕೃತ್ಯದ ದೃಶ್ಯ ಸೆರೆಯಾಗಿತ್ತು. ಸಾರ್ವಜನಿಕರೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

14 ಕಾರುಗಳು ಜಖಂ: ‘ಕೆಂಗೇರಿ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟೊಂದರಲ್ಲಿ ನೆಲೆಸಿದ್ದ ಸ್ನೇಹಿತರೊಬ್ಬರ ಹುಟ್ಟುಹಬ್ಬ ಆಚರಿಸಲು ಸೆ. 23ರಂದು ಆರೋಪಿಗಳು ಬಂದಿದ್ದರು. ತಮ್ಮ ಜೊತೆ ಕ್ರಿಕೆಟ್ ಬ್ಯಾಟ್ ತಂದಿದ್ದರು. ಹುಟ್ಟುಹಬ್ಬ ಪಾರ್ಟಿ ಮುಗಿಸಿಕೊಂಡು ವಾಪಸು ಹೊರಟಿದ್ದ ಆರೋಪಿಗಳು, ಪೆಟ್ರೋಲ್‌ ಬಂಕೊಂದಕ್ಕೆ ಹೋಗಿ ಪಾನೀಯ ಖರೀದಿಸಿದ್ದರು. ನಂತರ, ಹಲವು ರಸ್ತೆಗಳಲ್ಲಿ ಬೈಕ್‌ಗಳಲ್ಲಿ ಸುತ್ತಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸಾರ್ವಜನಿಕರು ಮನೆಗಳ ಮುಂದೆ ರಸ್ತೆ ಬದಿಯಲ್ಲಿ ಕಾರುಗಳನ್ನು ನಿಲ್ಲಿಸಿದ್ದರು. ಅಂಥ ಕಾರುಗಳ ಬಳಿ ಹೋಗಿದ್ದ ಆರೋಪಿಗಳು, ಬ್ಯಾಟ್‌ನಿಂದ ಗಾಜುಗಳನ್ನು ಒಡೆದು ಪರಾರಿಯಾಗಿದ್ದರು. ಆರೋಪಿಗಳ ಕೃತ್ಯದಿಂದ 14 ಕಾರುಗಳು ಜಖಂಗೊಂಡಿವೆ. ಕೃತ್ಯದ ಬಗ್ಗೆ ರಾಜರಾಜೇಶ್ವರಿನಗರ ಹಾಗೂ ಕೆಂಗೇರಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು’ ಎಂದೂ ಹೇಳಿದರು.

ಉದ್ಯಮಿಗಳ ಮಕ್ಕಳು: ‘ಬಂಧಿತ ಆರೋಪಿಗಳ ಪೈಕಿ ಕೆಲವರು ಉದ್ಯಮಿಗಳ ಮಕ್ಕಳು. ಕಾಲೇಜಿನ ವಸತಿ ನಿಲಯದಲ್ಲಿ ವಾಸವಿದ್ದರು. ಪಾರ್ಟಿ ಇದ್ದಾಗ ಒಟ್ಟಿಗೆ ಸೇರುತ್ತಿದ್ದರು. ಇದೇ ಮೊದಲ ಬಾರಿಗೆ ಕುಡಿದ ಅಮಲಿನಲ್ಲಿ ಅವರೆಲ್ಲ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.

‘ಆರೋಪಿಗಳ ಕೃತ್ಯದ ಬಗ್ಗೆ ಕಾಲೇಜಿನವರಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.